ಬೇಲೂರು: ಕಲ್ಲು ಗಣಿಗಾರಿಕೆಯಲ್ಲಿ ಟಿಪ್ಪರ್ ಲಾರಿಗಳು ಓವರ್ ಲೋಡ್ ಮಾಡಿಕೊಂಡು ರಸ್ತೆಯಲ್ಲಿ ತೆರಳುತ್ತಿರುವುದರಿಂದ ತಾಲೂಕಿನ ಹೊನ್ನೇನಹಳ್ಳಿ, ಹನಿಕೆ, ಸಂಶೆಟ್ಟಿಹಳ್ಳಿ, ಮುತ್ತುಗನ್ನೆ ಸೇರಿದಂತೆ ಇತರ ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಕಲ್ಲು ಗಣಿಗಾರಿಕೆಯಿಂದ ಮತ್ತು ಹೊರ ತಾಲೂಕು ಮತ್ತು ಜಿಲ್ಲೆಗಳಿಂದ ಓವರ್ ಲೋಡ್ ತುಂಬಿಕೊಂಡು ಬರುವ ಟಿಪ್ಪರ್ ಲಾರಿಗಳಿಂದ ಸಾಕಷ್ಟು ಅಪಘಾತದ ಜತೆಗೆ ರಸ್ತೆಗಳು ಗುಂಡಿಬಿದ್ದು ಹಾಳಾಗುತ್ತಿವೆ. ಸಾರ್ವಜನಿಕರ ವಾಹನಗಳು ಓಡಾದಂತ್ತಾಗಿದ್ದು, ದುರಸ್ತಿಗೂ ಹೆಚ್ಚಿನ ಹಣ ಬೇಕಾಗುತ್ತದೆ. ಆದ್ದರಿಂದ ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಓವರ್ ಲೋಡ್ ತುಂಬಿಕೊಂಡು ಬರುವ ಲಾರಿಗಳನ್ನು ವಶಕ್ಕೆ ಪಡೆದು ಸೀಜ್ ಮಾಡಬೇಕು. ತಾಲೂಕಿಗೆ ಹೊರಗಿನಿಂದ ಬರುವ ಲಾರಿಗಳನ್ನು ಗಡಿ ಭಾಗದಲ್ಲೇ ತಡೆದರೆ ರಸ್ತೆಗಳನ್ನು ಉಳಿಸಬಹುದು. ಇಲ್ಲದಿದ್ದಲ್ಲಿ ಎಷ್ಟೇ ದುರಸ್ತಿ ಪಡಿಸಿದರೂ ರಸ್ತೆ ಉಳಿಯುವುದಿಲ್ಲ. ಆದ್ದರಿಂದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದ ಅವರು, ಕೆಪಿಟಿಸಿಎಲ್‌ನವರು ತಾಲೂಕಿನ ಬಿಕ್ಕೋಡು, ಹನಿಕೆ, ಅಡಗೂರು ಮತ್ತು ಕೋಳಗುಂದ ವ್ಯಾಪ್ತಿಯಲ್ಲಿ(ಎಂಇಎಸ್) ಸೆಕ್ಷನ್ ಆಫೀಸ್‌ಗಳನ್ನು ತೆರೆಯಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿದ್ದು, ಅವರಿಂದಲೂ ಉತ್ತಮ ಸ್ಪಂದನೆ ದೊರಕಿದೆ. ಆದರೆ ಟೆಕ್ನಿಕಲ್ ಸಮಸ್ಯೆ ಇರುವುದರಿಂದ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ. ತಾಲೂಕಿನಲ್ಲಿ ಕಾಡಾನೆ ಮತ್ತು ಕಾಡುಪ್ರಾಣಿಗಳ ಸಮಸ್ಯೆ ಇದೆ. ಜತೆಗೆ ಕುಡಿಯುವ ನೀರು, ರೈತರಿಗೆ ಸಮಸ್ಯೆಯಾಗದಂತೆ ವಿದ್ಯುತ್ ಕೊಡಬೇಕಿದೆ. ಹಾಗಾಗಿ ಕೆಪಿಟಿಸಿಎಲ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳ ಗುರುತಿಸಬೇಕು ಎಂದು ಸೂಚಿಸಿದರು.
ಪಟ್ಟಣದ ಹೊಳೆ ಬೀದಿಗೆ ಸೇತುವೆ ಮತ್ತು ರಸ್ತೆ ಅಭಿವೃದ್ಧಿಗೆ ಪಿಡಬ್ಲುೃಡಿ ಸಚಿವರು 36 ಕೋಟಿ ರೂ. ಮಂಜೂರು ಮಾಡಿ ಮೀಸಲಿಟ್ಟಿದ್ದಾರೆ. ಅಲ್ಲಿ 93 ಅಡಿ ರಸ್ತೆ ಜಾಗವಿದೆ. ಅದನ್ನು ಕಂದಾಯ ಮತ್ತು ಪಿಡಬ್ಲೂಡಿ, ಪುರಸಭೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಚರ್ಚಿಸಿ ಒತ್ತುವರಿ ಜಾಗವನ್ನು ಬಿಡಿಸಬೇಕು. ಇಲ್ಲಿ ಯಾವುದೇ ಒತ್ತಡ ಅಥವಾ ಪ್ರಬಲರಿದ್ದರೂ ಕೇರ್ ಮಾಡದೆ ಇತಿಹಾಸ ಪ್ರಸಿದ್ಧ ಬೇಲೂರು ದೇವಸ್ಥಾನಕ್ಕೆ ಸುಗಮವಾಗಿ ತೆರಳಲು ಅವಕಾಶ ಮಾಡಿಕೊಡಬೇಕಿದೆ. ಅಲ್ಲದೆ ಯಾರೇ ಎಷ್ಟೇ ಪ್ರಭಾವಿಗಳಿದ್ದರೂ 93 ಅಡಿ ಜಾಗವನ್ನು ಬಿಡಿಸಲೇಬೇಕು. ಇದರ ಅಭಿವೃದ್ಧಿಗೆ ಈಗಿರುವ 35 ಕೋಟಿ ರೂ. ಜತೆಗೆ ಹೆಚ್ಚುವರಿ 35 ಕೋಟಿ ರೂ. ತರುತ್ತೇನೆ. ಇದಕ್ಕಾಗಿ ಕಂದಾಯ ಇಲಾಖೆಯವರು ಹಳೆಯ ದಾಖಲೆಗಳಂತೆ ಜಾಗ ವಜಾ ಮಾಡಿಸಲು ಮುಂದಾಗಬೇಕು. ಕಾಡಾನೆ ದಾಳಿಗೆ ಬಲಿಯಾದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕೆಂದು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೆ ಸರ್ಕಾರ 20 ಲಕ್ಷ ರೂ, ಪರಿಹಾರ ಕೊಡುತ್ತಿದೆ. ಮತ್ತು ಹಿಂದಿನವರಿಗೂ ಹೆಚ್ಚಿನ ಪರಿಹಾರ ಕೊಡುವಂತೆ ಒತ್ತಾಯಿಸಿದ್ದೆ. ಮತ್ತೆ ಒತ್ತಾಯಿಸುತ್ತೇನೆ ಎಂದರು.
ಸಭೆಯಲ್ಲಿ ಆಡಳಿತಾಧಿಕಾರಿ ಹಾಗೂ ಪಶುವೈದ್ಯಕೀಯ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್.ಕೆ.ಆರ್, ತಾಪಂ ಇಒ ವಸಂತಕುಮಾರ್ ಇದ್ದರು.