ಬೆಂಗಳೂರು: ರಸ್ತೆ ಸುರಕ್ಷತೆಗೆ ಸ್ವಯಂ ಶಿಸ್ತು ಮತ್ತು ಅಪಘಾತದಿಂದ ನಮ್ಮನ್ನು ಅವಲಂಬಿತವಾಗಿರುವ ಕುಟುಂಬದ ಮೇಲೆ ಮತ್ತು ನಮ್ಮ ಮೇಲೆ ಆಗುವ ಧೀರ್ಘಾವಧಿ ಪರಿಣಾಮಗಳ ಅರಿವು ಹಾಗೂ ಜಾಗೃತಿ ಇರಬೇಕು. ಆಗಲೇ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಸಾರಿಗೆ ಇಲಾಖೆ ಮತ್ತು ನಗರ ಪೊಲೀಸ್ ಸಹಯೋಗದಲ್ಲಿ ಶನಿವಾರ ನಗರದ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸೇಫಥಾನ್-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿದರೆ ಅದರಿಂದ ವೈಯಕ್ತಿಕ ನಷ್ಟದ ಜತೆಗೆ ಅವಲಂಬಿತ ಕುಟುಂಬವು ಅನೇಕ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಮತ್ತು ಜಾಗೃತಿ ಇರಬೇಕು. ಸೇಫಥಾನ್‌ನಂತಹ ಕಾರ್ಯಕ್ರಮಗಳು ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಜಾಗೃತಿಗಾಗಿ ಓಟ, ನಡಿಗೆ ಮತ್ತು ಸೈಕ್ಲಿಂಗ್‌ನಿಂದ ನಮ್ಮ ವೈಯಕ್ತಿಕ ಆರೋಗ್ಯ ಉತ್ತಮಗೊಳ್ಳುವ ಜತೆಗೆ ರಸ್ತೆಯಲ್ಲಿ ನಾವು ಯಾವ ರೀತಿ ಜವಾಬ್ದಾರಿಯಿಂದ ಇರಬೇಕು ಎನ್ನುವ ಪಾಠಗಳನ್ನು ಕಲಿಯಲು ಸಾಧ್ಯವಾಗುತ್ತದೆ. ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಸಾವಿರಾರು ಜನ ಜೀವ ಕಳೆದುಕೊಂಡರೆ, ಲಕ್ಷಾಂತರ ಜನ ಗಾಯಗೊಳ್ಳುತ್ತಾರೆ. ಅಪಘಾತಗಳಲ್ಲಿ ಶೇ.೭೦ರಷ್ಟು ದ್ವಿಚಕ್ರ ವಾಹನಗಳ ಪಾಲು ಇದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ಸೀಟ್ ಬೆಲ್ಟ್ ಧರಿಸದೆ ಇರುವುದು, ಅತಿ ವೇಗದ ಚಾಲನೆ, ಅಮಲಿನಲ್ಲಿ ವಾಹನ ಚಾಲನೆ ಮಾಡಬಾರದು. ವಾಹನದಲ್ಲಿರುವ ಪ್ರತಿ ಕ್ಷಣವು ಎಚ್ಚರ ವಹಿಸಬೇಕು, ಸಂಚಾರ ನಿಯಮ ಪಾಲಿಸಬೇಕು ಎಂದು ಸಚಿವರು ಕರೆ ನೀಡಿದರು.
ಅಂತರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಮಾತನಾಡಿ, ಮೊಬೈಲ್ ಫೋನ್‌ಗಳಿಂದ ಅಪಘಾತಗಳು, ಅನಾಹುತಗಳು ಹೆಚ್ಚಾಗುತ್ತಿವೆ. ಮೊಬೈಲ್ ಫೋನಿಗೆ ನಾವು ದಾಸರಾಗಬಾರದು. ತುರ್ತು ಕರೆಗಳಿದ್ದರೆ ವಾಹನವನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿ ಮಾತನಾಡಿ ನಂತರ ಪ್ರಯಾಣ ಮುಂದುವರಿಸಬೇಕು. ವಾಹನ ಚಾಲನೆ ವೇಳೆ ಫೋನ್ ಬಳಕೆ ಮಾಡಿದರೆ ಎಚ್ಚರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ಪಾದಚಾರಿಗಳು, ನಮ್ಮ ವೈಯಕ್ತಿಕ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರು ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು. ಸಹನೆ ಇರಬೇಕು. ವಾಹನ ದಟ್ಟಣೆ ಸಂದರ್ಭದಲ್ಲಿ ಮತ್ತು ಅವರಸರಿಂದ ನಮ್ಮ ರಕ್ತದ ಒತ್ತಡ ಹೆಚ್ಚಾಗಿ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಶಾಂತಚಿತ್ತದಿಂದ ಸಂಚಾರ ನಿಯಮಗಳನ್ನು ಪಾಲಿಸುತ್ತಾ ವಾಹನಗಳನ್ನು ಚಲಾಯಿಸಬೇಕು ಎಂದರು.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಾರಿಗೆ ಇಲಾಖೆ ಅಪರ ಆಯುಕ್ತ ಸಿ.ಮಲ್ಲಿಕಾರ್ಜುನ ಹಾಗೂ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಿ.ಟಿ. ಮೂರ್ತಿ, ಕಾವೇರಿ ಆಸ್ಪತ್ರೆಯ ಮುಖ್ಯಸ್ಥ ವಿಜಯ್ ಭಾಸ್ಕರನ್, ಚಿತ್ರನಟಿಯರಾದ ನಟಿ ಪ್ರಣಿತಾ, ಸಂಪದ ಉಪಸ್ಥಿತರಿದ್ದರು.