ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ಶ್ರಮದಾನದ ಮೂಲಕ ಅಬ್ಬನಡ್ಕ ರಸ್ತೆಯ ಹೊಂಡವನ್ನು ಮುಚ್ಚಿದರು. 
ನ್ಯೂಸ್

ಫ್ರೆಂಡ್ಸ್ ಕ್ಲಬ್‌ನಿಂದ ರಸ್ತೆ ದುರಸ್ತಿ

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕೆದಿಂಜೆ ಸಂಪರ್ಕಿಸುವ ಅಬ್ಬನಡ್ಕ-ಬೋಳಪದವು ರಸ್ತೆಯಲ್ಲಿರುವ ಅಪಾಯಕಾರಿ ಹೊಂಡಗಳನ್ನು ಭಾನುವಾರ ಶ್ರಮದಾನ ನಡೆಸಿ ಮುಚ್ಚುವ ಮೂಲಕ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ತಂಡ ಸಾರ್ವಜನಿಕರ ಮೆಚ್ಚುಗೆ ಪಡೆದುಕೊಂಡಿದೆ.
ಕೆದಿಂಜೆ-ಬೋಳಪದವು ಸಂಪರ್ಕಿಸುವ ಈ ಮುಖ್ಯ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಅಬ್ಬನಡ್ಕ ಭಾಗದ ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳು ಉಂಟಾಗಿದ್ದವು. ಮಳೆನೀರು ತುಂಬಿದ್ದರಿಂದ ಹೊಂಡಗಳು ಗೋಚರಿಸದೇ ವಾಹನಗಳು ಅಪಘಾತಕ್ಕೊಳಗಾಗುತ್ತಿದ್ದವು. ಬೃಹತ್ ವಾಹನಗಳು ಸಂಚರಿಸುವುದೇ ಕಷ್ಟಕರವಾಗಿದ್ದವು. ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇದ್ದುದ್ದರಿಂದ ಸ್ವತಃ ಯುವಕರೇ ಶ್ರಮದಾನ ಮೂಲಕ ಗುಂಡಿಗಳನ್ನು ಮುಚ್ಚಿದ್ದಾರೆ.

ಮೂರು ಗ್ರಾಮಕ್ಕೆ ಸಂಪರ್ಕ

ಅಬ್ಬನಡ್ಕ-ಬೋಳಪದವು ರಸ್ತೆಯು ಬೋಳ ಕೋಡಿ, ಕೆದಿಂಜೆ, ಬೆಳ್ಮಣ್ ಹಾಗೂ ಇಟ್ಟಮೇರಿ ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿತರಾಗಿದ್ದು, ಕಟೀಲು , ಕಿನ್ನಿಗೋಳಿ, ಮೂಡಬಿದಿರೆಗೆ ಇದು ಪ್ರಮುಖ ಒಳರಸ್ತೆಯಾಗಿದೆ.

ರಸ್ತೆಯು ಕೆಟ್ಟಿದ್ದರಿಂದ ಮೂರು ಗ್ರಾಮಗಳ ಗ್ರಾಮಸ್ಥರು ಬಹಳ ಪರದಾಡುತ್ತಿದ್ದರು. ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯದೆ, ನಾವೇ ಈ ಕೆಲಸವನ್ನು ಮಾಡಿದ್ದೇವೆ. ಇದು ನಮ್ಮ ಊರು, ಇದರ ರಕ್ಷಣೆ ನಮ್ಮ ಜವಾಬ್ದಾರಿ. ಹೀಗಾಗಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಕಾರ್ಯ ಮಾಡಿದ್ದೇವೆ.

ಸದ್ಯಕ್ಕೆ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸುಗಮವಾಗಿದ್ದು, ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಈ ರಸ್ತೆಗೆ ಶಾಶ್ವತ ಡಾಂಬರೀಕರಣ ಮಾಡಬೇಕು.