ಕೋಲಾರ: ಜಿಲ್ಲೆಯಲ್ಲಿ ತಿಂಗಳುಗಳು ಉರುಳಿದರೂ ಹಾಳಾದ ರಸ್ತೆಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಕ್ಟೋಬರ್ 2ನೇ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳ ಸಭೆ ನಡೆಸಿ ಹೋದವರು ಮತ್ತೆ ಇತ್ತ ತಿರುಗಿ ನೋಡಿಲ್ಲ.
ದುರಸ್ತಿಗೆ ಅಂದಾಜುಪಟ್ಟಿ, ಮಂಜೂರು, ಟೆಂಡರ್ಗೆ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಮಳೆಯಾಗುತ್ತಿದ್ದಾಗ ಕೆಸರು, ಈಗ ಧೂಳು ಮೆತ್ತಿಸಿಕೊಳ್ಳುತ್ತಿರುವ ಜನ ಹಿಡಿಶಾಪಹಾಕುತ್ತಿದ್ದಾರೆ.
ಕೋಲಾರಮ್ಮ ಕೆರೆ ಕಟ್ಟೆ ಕೆಳಗಿನ ರಸ್ತೆ, ಬೇತಮಂಗಲ ರಸ್ತೆ, ಬೈಪಾಸ್ನಿಂದ ಛತ್ರಕೋಡಿಹಳ್ಳಿವರೆಗಿನ ಟೇಕಲ್ ರಸ್ತೆ, ಇದೇ ಮಾರ್ಗದಲ್ಲಿ ಕೋರಗಂಡಹಳ್ಳಿಯಿಂದ ಮುದುವತ್ತಿ, ಪಾರ್ಶ್ವಗಾನಹಳ್ಳಿ, ಹುಣಸಿಕೋಟೆ ಟೇಕಲ್ವರೆಗಿನ ರಸ್ತೆ, ವೀರಾಪುರದಿಂದ ಮುದುವಾಡಿವರೆಗಿನ ಶ್ರೀನಿವಾಸಪುರ ರಸ್ತೆ, ಎಪಿಎಂಸಿಯಿಂದ ಮಾಲೂರು ತನಕ ಬಹುತೇಕ ಕಡೆ ರಸ್ತೆ ತೀರಾ ಹದಗೆಟ್ಟಿದ್ದು, ಬೃಹತ್ ಗುಂಡಿಗಳನ್ನು ಮುಚ್ಚಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜೇಸಿಬಿಯಿಂದ ರಸ್ತೆಯನ್ನೇ ಸಡಿಲಗೊಳಿಸಿ ಹಾಗೇ ಬಿಡುತ್ತಿದ್ದಾರೆ. ಇದರಿಂದ ಹಳ್ಳಗಳಲ್ಲಿ ವಾಹನಗಳು ಕುಲುಕುತ್ತ ತೆರಳುವ ತಾಪತ್ರಯ ತಪ್ಪಿದೆಯಾದರೂ ವಾಹನಗಳ ಹಿಂದೆ ಸಂಚರಿಸುವ ದ್ವಿಚಕ್ರವಾಹನ ಸವಾರರು ಧೂಳಿನಿಂದ ತತ್ತರಿಸುವಂತಾಗಿದೆ.
ನಿಯಮ ಗಾಳಿಗೆ ತೂರಿ ಕಾಮಗಾರಿ: ರಸ್ತೆ ನಿಮಾರ್ಣವಾದ ಬಳಿಕ ಕೆಲವು ವರ್ಷ ನಿರ್ವಹಣೆ ಹೊಣೆ ಗುತ್ತಿಗೆದಾರರು ಅಥವಾ ನಿಮಾರ್ಣ ಸಂಸ್ಥೆಯದ್ದಾಗಿರುತ್ತದೆ. ರಾಜ್ಯ, ಜಿಲ್ಲೆ ಹೆದ್ದಾರಿಗಳು ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಜಲ್ಲಿಕಲ್ಲು, ಡಾಂಬರು ಹಾಕಬೇಕೆಂಬ ನಿಯಮವಿರುತ್ತದೆ. ಮಳೆ ನೀರು ಸರಾಗವಾಗಿ ಹರಿಯಲು ರಸ್ತೆ ಬದಿ ಕಾಲುವೆ, ಮೋರಿಗಳ ನಿಮಾರ್ಣ ಮಾಡಬೇಕಿರುತ್ತದೆ. ಆದರೆ ಜಿಲ್ಲೆಯಲ್ಲಿ ಇಂತಹ ಅದೆಷ್ಟೋ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗಳನ್ನು ಮಾಡಲಾಗಿದೆ. ಇದರ ಬಗ್ಗೆ ಗುತ್ತಿಗೆದಾರರು, ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಉಸ್ತುವಾರಿ ಸಚಿವರು ಹೇಳುತ್ತ ಬಂದಿರುವರಾದರೂ ಈ ವರೆಗೆ ಅದು ಕಾರ್ಯಗತವಾಗಿಲ್ಲ.
ಸವಾರರಿಗೆ ತೊಂದರೆ: ಸಚಿವರ ಸಭೆ ಬಳಿಕ ಈಗ ಸರಿಹೋಗಬಹುದು, ಆಗ ಸರಿಹೋಗಬಹುದು ಎಂದು ಭಾವಿಸಿದ್ದ ಸಾರ್ವಜನಿಕರಿಗೆ ಮೃತ್ಯುಸ್ವರೂಪದ ಗುಂಡಿಗಳಿಂದ ಮುಕ್ತಿ ದೊರಕಲಿಲ್ಲ. ಜಿಲ್ಲೆಯಲ್ಲಿ 423 ಕಿಮೀ ರಾಜ್ಯ ಹೆದ್ದಾರಿ, 1496 ಕಿಮೀ ಜಿಲ್ಲಾ ಪ್ರಮುಖ ಮಾರ್ಗ(ಎಂಡಿಆರ್), 4213 ಕಿಮೀ ಗ್ರಾಮೀಣ ಸಂಪರ್ಕ ರಸ್ತೆಗಳಿವೆ. ಇದರಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಮಾರ್ಗಗಳು ಬಹುತೇಕ ಹಾಳಾಗಿದ್ದು, ಸಾರ್ವಜನಿಕರು ಸಂಚರಿಸುವಾಗ ಯಮಯಾತನೆ ಅನುಭವಿಸುವಂತಾಗಿದೆ.
ಮಳೆ ಹಿಂದೇಟು ಹಾಕಿರುವುದರಿಂದ ರಾಜ್ಯ ಹೆದ್ದಾರಿಗಳ ಹಳ್ಳಗಳಿಗೆ ಕನಿಷ್ಠ ಜಲ್ಲಿಯನ್ನಾದರೂ ತುಂಬಿಸಿ ಅದರ ಮೇಲೆ ಡಾಂಬರು ಹಾಕಬೇಕಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು "ನೆಗಡಿಯಾದಾಗ ಮೂಗು ಕತ್ತರಿಸುವಂತೆ' ರಸ್ತೆಗಳನ್ನು ಜೆಸಿಬಿಗಳಿಂದ ಕೆರೆದು ಸಡಿಲಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ನು ಸಹಸ್ರಾರು ವಾಹನಗಳು ಸಂಚರಿಸುವ ಈ ಮಾರ್ಗಗಳಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗೆ ರಸ್ತೆಗಳು ಹಾಳಾಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಕಳಪೆ ಕಾಮಗಾರಿಗಳು, 20 ಟನ್ಗೆ ಬದಲಾಗಿ 40ಟನ್ ಜಲ್ಲಿ, ಎಂಸ್ಯಾಂಡ್ ತುಂಬಿಸಿಕೊಂಡು ಸಂಚರಿಸುವ ಟಿಪ್ಪರ್ಗಳ ವಿರುದ್ಧ ಕ್ರಮ ಕೈಗೊಳ್ಳದ ಆರ್ಟಿಒ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ರಸ್ತೆಗಳು ಹಾಳಾಗಲು ಕೊಡುಗೆ ನೀಡಿದ್ದಾರೆ. ಇದೆಲ್ಲದರ ವಿರುದ್ಧ ಧ್ವನಿ ಎತ್ತಬೇಕಾದ ಆರರಲ್ಲಿ ಐವರು ಶಾಸಕರು ಕಾಂಗ್ರೆಸ್ಸಿಗರಾಗಿದ್ದು, ತುಟಿಬಿಚ್ಚುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸುವುದನ್ನೇ ಮರೆತಿದ್ದಾರೆ. ಜನರು ನೋಟು ಕೊಟ್ಟರೆ ಓಟು ಹಾಕುತ್ತಾರೆ, ರಸ್ತೆಗಳು ಏನಾದರೆ ನಮಗೇನಾಗಬೇಕೆಂಬ ರ್ನಿಲಕ್ಷ$್ಯ ಮನೋಭಾವ ಪಕ್ಷಗಳಲ್ಲಿ ಮನೆಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಾಲೂರು ರಸ್ತೆಯನ್ನು 10 ಕೋಟಿ ರೂ. ವೆಚ್ಚದಲ್ಲಿ 7ಮೀಟರ್ ವಿಸ್ತರಣೆ ಜತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬದಿ ಬೇಲಿ ಸ್ವಚ್ಛತೆ, ಮೋರಿಗಳ ನಿಮಾರ್ಣಕ್ಕೆ ಮುಂದಾಗಿದ್ದೇವೆ. ಟೇಕಲ್ ರಸ್ತೆ ದುರಸ್ತಿಗೆ 8ಕೋಟಿ ರೂ. ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ವಲಯ ಸಮಿತಿಯಲ್ಲಿ ಇನ್ನಷ್ಟೇ ಮಂಜೂರಾತಿ ಸಿಗಬೇಕಿದೆ.
ಆರ್.ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರ, ಪಿಡಬ್ಲ್ಯೂಡಿ
ಕೋಲಾರ ಸುತ್ತ ಮತ್ತು ಸಂಪರ್ಕಿಸುವ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಸಚಿವ ಮುನಿರತ್ನ ಗುತ್ತಿಗೆದಾರರು, ಅಧಿಕಾರಿಗಳ ಜತೆ ಸೀಕ್ರೇಟ್ ಸಭೆ ನಡೆಸಿ ಹೋದವರು ಮತ್ತೆ ಇತ್ತ ತಲೆಹಾಕಿಲ್ಲ. ಸಭೆಗೆ ಜನಪ್ರತಿನಿಧಿಗಳನ್ನು ಕರೆಯದೆ ನಡೆಸಿದ್ದರ ಉದ್ದೇಶವೇನೆಂಬುದಕ್ಕೆ ಅವರೇ ಉತ್ತರಿಸಬೇಕಿದೆ. ಸರ್ಕಾರದ ಅಸಡ್ಡೆ ಮುಂದುವರಿದರೆ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು.
ಸಿಎಂಆರ್ ಶ್ರೀನಾಥ್, ಜೆಡಿಎಸ್ ಮುಖಂಡ