ಅರಕಲಗೂಡು: ತಾಲೂಕಿನ ರಾಮನಾಥಪುರ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಮಂಜೂರಾಗಿದ್ದ ಸ್ಮಶಾನ ಜಾಗಕ್ಕೆ ಓಡಾಡಲು ತೊಂದರೆಯಾಗಿದ್ದ ರಸ್ತೆಯನ್ನು ಗುರುತು ಮಾಡಿಕೊಡಲಾಯಿತು ಎಂದು ಗ್ರೇಡ್-2 ತಹಸೀಲ್ದಾರ್ ಸಿ.ಆರ್.ಸ್ವಾಮಿ ತಿಳಿಸಿದರು.
ಬಿಳಗೂಲಿ ಗ್ರಾಮದ ಸ.ನಂ. 17 ರಲ್ಲಿ ಮುಸ್ಲಿಂ ಸಮ್ಮುದಾಯಕ್ಕೆ ಶವಸಂಸ್ಕಾರ ಮಾಡಲು ಒಂದು ಎಕರೆ ಜಾಗವನ್ನು 2016-17ನೇ ಸಾಲಿನಲ್ಲಿ ಮಂಜೂರಾಗಿದ್ದು, ಈ ಪ್ರದೇಶಕ್ಕೆ ತೆರಳಲು ಸೂಕ್ತ ದಾರಿ ಇರಲಿಲ್ಲ. ರಸ್ತೆಗೆ ಜಾಗ ಕೋರಿ ಮುಸ್ಲಿಂ ಸಮುದಾಯದವರು ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಈ ಮೇರೆಗೆ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರ ಸೂಚನೆಯಂತೆ ಸ್ಥಳಕ್ಕೆ ತಾಲೂಕು ಮೋಜಿಣಿದಾರರಿಂದ ಅಳತೆ ಕಾರ್ಯ ನಡೆಸಿ ಸದರಿ ಪ್ರದೇಶದಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಬಿಳಗುಲಿ ಗ್ರಾಮದ ರೈತರ ಮನವೊಲಿಸಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ಮಂಗಳವಾರ ಮಾಹಿತಿ ನೀಡಿದರು.
ರಾಜಸ್ವ ನಿರೀಕ್ಷಕ ಭಾಸ್ಕರ್, ತಾಲೂಕು ಮೋಜಿಣಿದಾರ ಅನಂತ್, ಗ್ರಾಮ ಆಡಳಿತ ಅಧಿಕಾರಿ ಕೆ.ಜೆ.ಧರ್ಮೇಶ್ ಹಾಗೂ ಗ್ರಾಮಸ್ಥರು ಇದ್ದರು.