ಶಿಕಾರಿಪುರ: ಬೀದಿಬದಿಯ ವ್ಯಾಪಾರಿಗಳು, ಗ್ಯಾರೇಜ್ ಮಾಲೀಕರು ಪಟ್ಟಣದ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗಿದೆ. ಕೂಡಲೇ ಅವರನ್ನು ಬೇರೆಡೆ ವ್ಯವಸ್ಥೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪುರಸಭೆ ಸದಸ್ಯರು ಒಕ್ಕೊರಲಿಂದ ಆಗ್ರಹಿಸಿದರು.
ಸಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ಬಸ್ ನಿಲ್ದಾಣ ಸೇರಿ ಹಲವು ಮುಖ್ಯ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಪುರಸಭೆಯಿಂದ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಹಿತದೃಷ್ಟಿಯಿಂದ ಎಲ್ಲರೂ ಸ್ವಚ್ಛತೆ ಕಾಪಾಡಬೇಕು. ಕೆಲವೆಡೆ ಕಸದ ವಾಹನಗಳು ಬಂದು ಹೋದ ನಂತರ ಸಣ್ಣಪುಟ್ಟ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳು ರಸ್ತೆಗೆ ಕಸವನ್ನು ಹಾಕುತ್ತಿದ್ದಾರೆ. ಕಸ ಹಾಕುವವರಿಗೆ ಎಚ್ಚರಿಕೆ ನೀಡಬೇಕು. ಶಿಕಾರಿಪುರ ಪಟ್ಟಣ ವೇಗವಾಗಿ ಬೆಳೆಯುತ್ತಿರುವುದರಿಂದ ಕಸದ ಗಾಡಿಗೆ ಕಸ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾನೂರು ಗ್ರಾಮದ ಸರ್ವೇ ನಂ.168/ಪಿ/ನಲ್ಲಿ 2001/02 ರಲ್ಲಿ ಅನಧಿಕೃತ ಕಟ್ಟಡಗಳ ಹಕ್ಕುಪತ್ರಗಳನ್ನು ಖಾತೆ ಮಾಡಿದ್ದು, ಅಂದಿನ ಎಸಿಯವರೇ ಹಕ್ಕುಪತ್ರ ವಿತರಿಸಿದ್ದಾರೆ. ಉಳಿದ ಹಕ್ಕುಪತ್ರಗಳನ್ನೂ ಖಾತೆ ಮಾಡಿಕೊಡಬೇಕು ಮತ್ತು ವಿನಾಯಕನಗರ 2 ಮತ್ತು 5ನೇ ಕ್ರಾಸ್‌ನಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕೆಂದು ರೂಪಕಲಾ ಹೆಗಡೆ ಒತ್ತಾಯಿಸಿದರು.
ಪ್ರಶಾಂತ್ ಜೀನಳ್ಳಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಎದುರು ಆಟೋ ಸ್ಟಾೃಂಡ್ ನಿರ್ಮಿಸಬೇಕು, ದೇವರಾಜ ಅರಸು ನಗರ, ಶ್ರೀಶೈಲ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು. ಸರ್ಕಾರಿ ಆಸ್ಪತ್ರೆಯ ಪಕ್ಕ ಚೆನ್ನಳ್ಳಿ ರಸ್ತೆಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸಿ, ಚರಂಡಿಗೆ ಸ್ಲಾೃಬ್ ಅಳವಡಿಸಬೇಕು ಎಂದು ಮನವಿ ಮಾಡಿದರು.
ಆಟೋ ಟಿಪ್ಪರ್, ಮುಕ್ತಿವಾಹಿನಿ, ಮನೆ ಮನೆಗೆ ಡಸ್ಟ್ ಬಿನ್, ಟ್ರಾೃಕ್ಟರ್, ಮೊಬೈಲ್ ಟಾಯ್ಲೆಟ್ ಸೇರಿ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯಂತ್ರ, ಉಪಕರಣಗಳನ್ನು ಖರೀದಿಸಲು ನಿರ್ಧರಿಸಲಾಯಿತು.
ಶಾಸಕ ಬಿ.ವೈ.ವಿಜಯೇಂದ್ರ, ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಧಿಕಾರಿ ಭರತ್ ಇತರರಿದ್ದರು.