ನ್ಯೂಸ್

ಕರೊನಾ ಸಂಕಷ್ಟದ ನಡುವೆಯೂ ಶೇ.97 ಪ್ರಗತಿ

Dakshina Kannada

ಮಂಗಳೂರು: ಕರೊನಾ ಸಂಕಷ್ಟದ ನಡುವೆಯೂ ಲೋಕೋಪಯೋಗಿ ಇಲಾಖೆ 2019- 20 ನೇ ಸಾಲಿನಲ್ಲಿ 9,000 ಕೋಟಿ ರೂ.ಬಜೆಟ್ ಮಂಡಿಸಿ 8,788 ಕೋಟಿ ರೂ.ವೆಚ್ಚಮಾಡಿ ಶೇ.97 ಪ್ರಗತಿ ಸಾಧಿಸಿದೆ. 8400 ಕೋಟಿ ರೂ.ಬಜೆಟ್ ಮಂಡಿಸಿ ಇದುವರೆಗೆ 5179 ಕೋಟಿ ರೂ. ತನಕ ವೆಚ್ಚ ಮಾಡಿ ಶೇ.60 ಪ್ರಗತಿ ಸಾಧಿಸಿದೆ ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ ನಂ.67 ಚತುಷ್ಪಥ ರಸ್ಥೆ ಹಾಗೂ ಸೇತುವೆ ಒಟ್ಟು ಅಂದಾಜು 50 ಕೋಟಿ ರೂ.ವೆಚ್ಚದ ಕಾಮಗಾರಿಗೆ ಮರವೂರಿನಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆದಿವೆ. ಸ್ಮಾರ್ಟ್ ಸಿಟಿ ಯೋಜನೆಗೆ 700 ಕೋಟಿ ರೂ.ಬಂದಿದೆ. ನೇತ್ರಾವತಿ ಹಳಿ ದ್ವಿಗುಣ ಕಾಮಗಾರಿ 28 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಎಂಆರ್‌ಪಿಎಲ್ 1810 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡಿದೆ ಎಂದರು.

ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಸಚಿವ ಎಸ್.ಅಂಗಾರ, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ, ಮುಖಂಡರಾದ ಸುಧೀರ್ ಶೆಟ್ಟಿ, ಸುಪ್ರಿತಾ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು. ಲೋಕೋಪಯೋಗಿ ಇಲಾಖೆ ಚೀಫ್ ಇಂಜಿನಿಯರ್ ಕಾಂತರಾಜು ವಂದಿಸಿದರು.

6579 ಕಿ.ಮೀ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. 322 ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ. 418 ಕಿ.ಮೀ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಿಸಿದ್ದೇವೆ. 30 ಕಿ.ಮೀ ಪೂರ್ಣಗೊಳಿಸಿದ್ದೇವೆ.

ಗೋವಿಂದ ಎಂ.ಕಾರಜೋಳ ಉಪಮುಖ್ಯಮಂತ್ರಿ