ಉಡುಪಿ: ಭಾರತೀಯ ಭೂಸೇನೆಯ ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಯಸ್ (88 ವರ್ಷ)ಅವರು ಬುಧವಾರ ತಡ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿ, ನಾಲ್ವರು ಪುತ್ರಿಯರು, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.
ಅವರ ಅಂತಿಮ ಸಂಸ್ಕಾರ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಮಣಿಪಾಲ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ.
ಕಳೆದ ಎರಡು ದಶಕಗಳಿಂದ ಆರ್ ಎಲ್ ಡಯಸ್ ರವರು ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿ ಹಾಗು ಅಧ್ಯಕ್ಷರಾಗಿದ್ದು , ಉಡುಪಿ ಭಾಗದ ರೈಲ್ವೆ ಸೇರಿದಂತೆ ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಕೆಲಸ ಮಾಡಿಸುವಲ್ಲಿ ಯಶಸ್ಸು ಕಂಡಿದ್ದರು. ಉಡುಪಿ ರೈಲ್ವೆ ಯಾತ್ರಿ ಸಂಘದ ನೇತೃತ್ವದಲ್ಲಿ ಸಂಘಟಿತ ಹೋರಾಟದಿಂದ ಉಡುಪಿ ಭಾಗದಲ್ಲಿ ಹಲವಾರು ರೈಲ್ವೆ ಯೋಜನೆ ಜಾರಿಗೆ ಅವರು ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಜತೆಗೆ ಪರ್ಕಳ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಸ್ಪಂದನೆ, ಉಡುಪಿಯಲ್ಲಿ ನರ್ಮ್ ಬಸ್ ಓಡಾಟದ ಹಿಂದೆ ಅವರ ಪಾತ್ರವಿದೆ. ಇಂದ್ರಾಳಿ ರೈಲ್ವೆ ಸೇತುವೆಗೆ ಸತತವಾಗಿ ಮನವಿ ನೀಡಿದ ಪರಿಣಾಮ ಕಾಮಗಾರಿ ಆರಂಭವಾಗಿತ್ತು.