ಪೆಟ್ರೋಲ್​ನಲ್ಲಿ ಶೇ.31 ಎಥೆನಾಲ್ ಬೆರೆಸಿ ಮಾರಾಟ! ಪ್ರಯೋಗಾಲಯದ ವರದಿ ಮುಂದಿಟ್ಟು ಕೇಂದ್ರಕ್ಕೆ ಪತ್ರ ಬರೆದ ಸಚಿವ ರಿಜ್ವಾನ್ ಅರ್ಷದ್  
ನ್ಯೂಸ್

'ಎಥೆನಾಲ್ ಮಿಶ್ರಣಕ್ಕೆ ವಿರೋಧವಿಲ್ಲ, ಆದರೆ ಅತಿಯಾಗಿ ಬೇಡ'; ಕೇಂದ್ರ ಸಚಿವರ ಮುಂದೆ ಸಾಲು ಸಾಲು ಬೇಡಿಕೆಯಿಟ್ಟ ರಿಜ್ವಾನ್ ಅರ್ಷದ್..Rizwan Arshad

  • ಪೆಟ್ರೋಲ್​​ಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್​ ಮಿಶ್ರಣ ಮಾಡುತ್ತಿರುವ ವಿರುದ್ಧ ರಾಜ್ಯ ಸರ್ಕಾರ ಕಿಡಿ.

  • ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದ ಸಚಿವ ರಿಜ್ವಾನ್ ಅರ್ಷದ್.

  • ಹಲವು ಬೇಡಿಕೆಗಳನ್ನಿಟ್ಟು, E20 ಬಳಕೆ ಬಗ್ಗೆ ಪರಿಶೀಲಿಸಲು ಆಗ್ರಹಿಸಿದ ಸಚಿವ ರಿಜ್ವಾನ್ ಅರ್ಷದ್.

'ಎಥೆನಾಲ್ ಮಿಶ್ರಣದ ವಿಚಾರಕ್ಕೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಅತಿಯಾದ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗ್ತಿದೆ. ಮೈಲೇಜ್ ಕುಸಿತ ಎಂಬ ದೂರುಗಳು ಬಂದಿದೆ. ವಾಹನಗಳು ಸಂಪೂರ್ಣವಾಗಿ ಹೊಂದಿಕೊಳ್ಳುವವರೆಗೆ E10 ಎಥೆನಾಲ್​ ರಹಿತ ಪೆಟ್ರೋಲ್ ಲಭ್ಯವಿರಬೇಕು' ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಥೆನಾಲ್ ಮಿಶ್ರಣ ವಿರೋಧ

ಅಮೆರಿಕ ಮತ್ತು ಇಸ್ರೇಲ್ ಹಾಗೂ ಇರಾನ್​​ ಯುದ್ಧದ ಬಳಿಕ ಪೆಟ್ರೋಲ್​ ಹಾಗೂ ಡಿಸೇಲ್​ ದರದಲ್ಲಿ ಏರಿಕೆ ಕಂಡಿದೆ. ಜೊತೆಗೆ ಹಲವು ಕ್ಷೇತ್ರದ ಮೇಲೆಯೂ ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವನ್ನು ಭರಿಸಲು ಭಾರತ ಸರ್ಕಾರ ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಮುಂದಾಗಿರುವುದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ಪೆಟ್ರೋಲ್​ನಲ್ಲಿ ಶೇ.30ಕ್ಕೂ ಹೆಚ್ಚು ಮಟ್ಟದಲ್ಲಿ ಎಥೆನಾಲ್​ ಮಿಶ್ರಣವಾಗುತ್ತಿರುವುದು, ಇದರಿಂದ ವಾಹನಗಳು ಮೈಲೇಜ್​ ಕಳೆದುಕೊಳ್ಳುತ್ತಿರುವ ಬಗ್ಗೆ ಉಲ್ಲೇಖಿಸಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ, ಈ ಬಗ್ಗೆ ಪರಿಶೀಲಿಸಲು ರಾಜ್ಯ ಆಹಾರ ಸಚಿವ ರಿಜ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ. ಇದರೊಂದಿಗೆ ಲ್ಯಾಬ್ ರಿಪೋರ್ಟ್ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ.

ರಿಜ್ವಾನ್ ಅರ್ಷದ್ ಏನಂದ್ರು?

'ಎಥೆನಾಲ್ ಮಿಶ್ರಣಕ್ಕೆ ನಮ್ಮ‌ ವಿರೋಧವಿಲ್ಲ. ಆದರೆ, ಅತಿಯಾದ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗುತ್ತಿದೆ. ಮೈಲೇಜ್ ಕುಸಿತ ಎಂಬ ದೂರುಗಳು ಬಂದಿದೆ. ಸೆಪ್ಟೆಂಬರ್ ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಮಾದರಿ ಸಂಗ್ರಹಿಸಿದ್ದೆವು. ಮಾದರಿಗಳನ್ನು NABL-ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 14 ಮಾದರಿಗಳಲ್ಲಿ 11 ಕಡೆ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಇರುವುದು ಪತ್ತೆಯಾಗಿದೆ. ಎಥೆನಾಲ್ ಪ್ರಮಾಣ ಒಂದೇ ಸಮನಾಗಿಲ್ಲದೆ ಶೇ. 13.05 ರಿಂದ ಶೇ. 31.02ರವರೆಗೆ ಇದೆ' ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಸಚಿವರ ಬೇಡಿಕೆಗಳಿವು

'ಪೆಟ್ರೋಲ್ ಡಿಸ್ಪೆನ್ಸರ್‌ಗಳ ಪರಿಶೀಲನೆಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಕೇಂದ್ರದ ಅಧಿಸೂಚನ ವಿರುದ್ಧ ಅವರು ಕಿಡಿಕಾರಿದರು. ಶೇ. 90ರಷ್ಟು ಬಂಕ್‌ಗಳ ನಳಿಕೆಗಳಲ್ಲಿ ವ್ಯತ್ಯಾಸವಿರುವುದು ಪತ್ತೆಯಾಗಿದೆ. ಗ್ರಾಹಕರಿಗೆ ಕಡಿಮೆ ಇಂಧನ ಸಿಗುತ್ತಿರುವುದು ಸಾಬೀತಾಗಿದೆ. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು‌ ಪ್ರದರ್ಶಿಸಬೇಕು. ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ಎಥೆನಾಲ್ ಶೇಕಡಾವಾರು ನಮೂದಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

'ವಾಹನಗಳು ಸಂಪೂರ್ಣವಾಗಿ ಹೊಂದಿಕೊಳ್ಳುವವರೆಗೆ E10 ಎಥೆನಾಲ್ ರಹಿತ ಪೆಟ್ರೋಲ್ ಲಭ್ಯವಿರಬೇಕು. NABL-ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಸ್ವತಂತ್ರ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು. ಎಥೆನಾಲ್ ಮಿಶ್ರಣದಿಂದ ವಾಹನಗಳು ಹಾನಿಗೊಳಗಾದರೆ ಪರಿಹಾರ ನೀಡಲು ಪ್ರತ್ಯೇಕ ನಿಧಿ ರಚಿಸಬೇಕು' ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ರಾಮಲಿಂಗಾ ರೆಡ್ಡಿ ಏನಂದ್ರು?

ಎಥೆನಾಲ್ ಮಿಶ್ರಣ ಮತ್ತು ಅದರ ಉತ್ಪಾದನಾ ನೀತಿಯ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ಪ್ರಸ್ತಾಪಿಸಿ, ಈ ವಿಚಾರದಲ್ಲಿ ಗಡ್ಕರಿಯವರು ಬಹಳ ದುಡುಕಿದ್ರು ಎಂದು ಅನ್ನಿಸುತ್ತಿದೆ ಎಂದರು.

ಮೊದಲು ಒಂದು ಫೈಲಟ್ ಪ್ರಾಜೆಕ್ಟ್ ಮಾಡಬೇಕು. ಆಗ ಮಾತ್ರ ಆ ಯೋಜನೆಯಿಂದ ಆಗುವ ಸಾಧಕ-ಬಾಧಕಗಳೇನು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದನ್ನು ಬಿಟ್ಟು ಏಕಾಏಕಿ ಈ ರೀತಿ ಮಾಡುವುದು ಸರಿಯಲ್ಲ.

ಆದರೆ ಎಥೆನಾಲ್ ಗೆ ಉತ್ತೇಜನ ಕೊಟ್ರು, ಹಾಗಾಗಿ ಅದರ ಉತ್ಪಾದನೆ ಹೆಚ್ಚಾಯ್ತು. 100 ಲೀಟರ್ ನೀವು ಪ್ರೊಡ್ಯೂಸ್ ಮಾಡ್ತಿರ. ಅವರು ತೆಗೆದುಕೊಳ್ಳೋದು ಶೇ.40 ಮಾತ್ರಹಾಗಾಗಿ ಮೊದಲು ಫೈಲಟ್ ಪ್ರಾಜೆಕ್ಟ್ ಮಾಡಬೇಕು, ಆಗ ಸಾಧಕ ಬಾಧಕಗಳ ಬಗ್ಗೆ ಗೊತ್ತಾಗುತ್ತದೆ ಎಂದು ವಿಧಾನಸೌಧದಲ್ಲಿ ಅರಣ್ಯ ಸಚಿವ ರಾಮಲಿಂಗರೆಡ್ಡಿ ಹೇಳಿದರು, (ಏಜೆನ್ಸೀಸ್).