ಶಿವಮೊಗ್ಗ: ದೇಶಾದ್ಯಂತ ನರ್ಮದಾ, ಯಮುನಾ ಮತ್ತು ಗಂಗಾ ನದಿಗಳ ಉಳಿವಿಗಾಗಿ ದೊಡ್ಡಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ನದಿಗಳು ನಿರೀಕ್ಷೆ ಮೀರಿ ಮಲಿನವಾಗಿದ್ದು ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್‌ನಿಂದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಅಂಗವಾಗಿ ಆಯೋಜಿಸಿದ್ದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ನದಿಗಳ ಉಳಿವಿಗಾಗಿ ಹೋರಾಟಗಳು ನಡೆಯುತ್ತಿದೆ. ಮುಖ್ಯವಾಗಿ ಗಂಗಾ ನದಿಗಾಗಿ ಒಂದು ಹೋರಾಟ ಆರಂಭಿಸಿದ್ದೆವು. ಪ್ರತಿಭಟನೆ, ಹೋರಾಟದ ಮೂಲಕ ಜಾಗೃತಿ ಮಾಡದೆ ಜನರ ಜತೆ ಚೆರ್ಚೆ ಮಾಡಿ ಅರಿವು ಮೂಡಿಸಿದ್ದೆವು. ನಮ್ಮ ಹೋರಾಟಕ್ಕೆ ಅನೇಕ ಯುವಕರು ಬಂದಿದ್ದರು. ಗಂಗಾ ನದಿ ನಮ್ಮದೆನ್ನುವುದೇ ಜನರಿಗೆ ಗೊತ್ತಿರಲಿಲ್ಲ. ಯಮುನಾ ನದಿಗೆ ಕೂಡ ಚರಂಡಿ ನೀರು ಬಂದು ಸೇರುತ್ತಿದ್ದು, ನದಿ ಪರಿಸ್ಥಿತಿ ತುಂಬ ಕೆಟ್ಟದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ,ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಐಎಂಎ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ. ಎಸ್.ಶ್ರಿಧರ್, ಪ್ರಮುಖರಾದ ಗಿರೀಶ್ ಪಟೇಲ್, ಎಂ.ಶಂಕರ್, ಧಾರವಾಡ ಐಟಿಟಿ ಪ್ರಾಧ್ಯಾಪಕ ಪ್ರೊ. ಎಲ್.ಕೆ.ಶ್ರೀಪತಿ ಉಪಸ್ಥಿತರಿದ್ದರು.