ಶಿಕಾರಿಪುರ ಶ್ರೀ ಮಾರಿಕಾಂಬೆ ಜಾತ್ರೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಜತೆಗೆ ದೇವಿಯ ದರ್ಶನ ಪಡೆದರು. ಕೆ.ಎಸ್.ಗುರುಮೂರ್ತಿ, ಅಪರ್ಣಾ ಗುರುಮೂರ್ತಿ, ಗಾಯತ್ರಿ ಮಲ್ಲಪ್ಪ, ಸುಧೀರ್, ವೀರನ ಗೌಡ ಇತರರಿದ್ದರು.  
ನ್ಯೂಸ್

ಜಾತ್ರೋತ್ಸವಗಳಿಂದ ಆಚಾರ, ವಿಚಾರ ಉಳಿವು

ಶಿಕಾರಿಪುರ: ನಮ್ಮ ಹಿರಿಯರು ಜಾತ್ರೋತ್ಸವಗಳ ಆಚರಣೆ ಮೂಲಕ ಶಾಸ, ಸಂಪ್ರದಾಯ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕುಟುಂಬ ಸಮೇತರಾಗಿ ಮಾರಿಕಾಂಬೆ ದರ್ಶನಮಾಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂತಹ ಜಾತ್ರೆ, ಉತ್ಸವ, ಧಾರ್ಮಿಕ ಕಾರ್ಯಗಳಿಂದ ಧಾರ್ಮಿಕ ಭಾವನೆಗಳು ಉಜ್ಜೀವನಗೊಳ್ಳುತ್ತವೆ. ನಮಗರಿವಿಲ್ಲದ ಹಾಗೆ ಈ ನೆಲದ ಪಾರಂಪರಿಕ ಆಚರಣೆಗಳು ಮುಂದುವರಿಯುತ್ತವೆ ಎಂದರು.

ಲೋಕಕಲ್ಯಾಣಾರ್ಥ ನಡೆಯುವ ದೈವೀಕಾರ್ಯಗಳು ನಮ್ಮ ಧರ್ಮದ ಅಡಿಪಾಯವನ್ನು ಗಟ್ಟಿಗೊಳಿಸುತ್ತವೆ. ಆಚಾರ, ವಿಚಾರ, ಆಹಾರ, ಸಂಪ್ರದಾಯಗಳಲ್ಲಿ ಎಷ್ಟೇ ಭಿನ್ನತೆ ಇದ್ದರೂ ಜಾತ್ರೋತ್ಸವಗಳಲ್ಲಿ ನಾವೆಲ್ಲರೂ ಒಟ್ಟಾಗಿ ಎಲ್ಲ ತಾರತಮ್ಯ ಮರೆತು ದೇವರ ಸೇವೆ ಮಾಡಿ ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.

ದೇವಿಯ ಆಶೀರ್ವಾದದಿಂದ ಕಾಲಕಾಲಕ್ಕೆ ಮಳೆ, ಬೆಳೆಯಾಗುತ್ತಿದೆ. ನಾವು ಎಂದಿಗೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು. ಧರ್ಮದ ದಾರಿ ಎಂದರೆ ಅದು ರಾಜಪಥ. ನಾವು ಇಂತಹ ಆಚರಣೆಯಿಂದ ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮ ನೆರಳಾಗಿ ನಿಲ್ಲುತ್ತದೆ. ಧಾರ್ಮಿಕ ಚಿಂತನೆಗಳಿಂದ ನಮ್ಮ ಮನಸ್ಸು ಪ್ರುಲ್ಲವಾಗುತ್ತದೆ ಎಂದರು.

ಜಾತ್ರೆಯ ಯಶಸ್ಸಿಗಾಗಿ ತಾಲೂಕು ಆಡಳಿತ, ಜಾತ್ರಾ ಸಮಿತಿ, ಪುರಸಭೆ, ರಕ್ಷಣಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ. ಭಕ್ತರಿಗೆ ತೊಂದರೆ ಆಗಬಾರದೆಂದು ಸಾಕಷ್ಟು ಮುಂಜಾಗ್ರತೆ ವಹಿಸಿವೆ. ಹಾಗೆಯೇ ಭಕ್ತರು ಕೂಡ ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಜಾತ್ರಾ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್, ತೇಜಸ್ವಿನಿ ರಾಘವೇಂದ್ರ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅಪರ್ಣಾ ಗುರುಮೂರ್ತಿ, ಗಾಯತ್ರಿ ಮಲ್ಲಪ್ಪ, ಸುಧೀರ್, ವೀರನ ಗೌಡ, ಬೆಣ್ಣೆ ಪ್ರವೀಣ, ಶ್ರೀಧರ್ ನಾಡಿಗ್, ದೇವಸ್ಥಾನ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.