ನವದೆಹಲಿ: ವ್ಯಾಪಾರ ಸಂಸ್ಥೆಗಳಿಗೆ ಇನ್ನು ಮುಂದೆ ಏಳು ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ದೊರೆಯಲಿದೆ. ಅಪಾಯಕಾರಿ ಎಂದು ಪರಿಗಣಿಸಲಾದ ಅರ್ಜಿಗಳನ್ನು ಮಾತ್ರ ಖುದ್ದು ಸ್ಥಳ ಪರಿಶೀಲನೆ ಬಳಿಕ 30 ದಿನಗಳೊಳಗೆ ವಿಲೇವಾರಿ ಮಾಡಲಾಗುತ್ತದೆ.
ಕೆಲವು ಕ್ಷೇತ್ರ ಅಧಿಕಾರಿಗಳು ಅನುಮಾನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟು ಅನಗತ್ಯ ದಾಖಲೆಗಳನ್ನು ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಮಾರ್ಗಸೂಚಿ ಹೊರಡಿಸಿದೆ. ಅಧಿಕಾರಿಗಳು ವ್ಯಾಪಾರ ಸಂಸ್ಥೆಗಳಿಂದ ಆನ್ಲೈನ್ ಮೂಲಕ ಕೇಳಬಹುದಾದ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೋಂದಣಿ ಅರ್ಜಿ ಇತ್ಯರ್ಥಗೊಳಿಸುವಾಗ ಈ ದಾಖಲೆಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಸೂಚಿಸಬಾರದು ಎಂದೂ ಸ್ಪಷ್ಟಪಡಿಸಿದೆ.
ಪ್ರಿನ್ಸಿಪಲ್ ಪ್ಲೇಸ್ ಆಫ್ ಬಿಜಿನೆಸ್ಗೆ (ಪಿಪಿಒಬಿ) ಸಂಬಂಧಿಸಿದಂತೆ ಅರ್ಜಿದಾರರು ಇತ್ತೀಚಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮುನಿಸಿಪಲ್ ಖಾತಾ ಪ್ರತಿ, ಮಾಲೀಕರ ವಿದ್ಯುತ್ ಬಿಲ್ನ ಪ್ರತಿ, ಸ್ಥಳದ ಮಾಲೀಕತ್ವವನ್ನು ಖಚಿತಪಡಿಸುವ ನೀರಿನ ಬಿಲ್ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಜಾಗವನ್ನು ಬಾಡಿಗೆಗೆ ಪಡೆದಿದ್ದರೆ ಪಿಪಿಒಬಿಗೆ ಸಂಬಂಧಿಸಿದ ಯಾವುದಾದರೂ ಒಂದು ದಾಖಲೆಯ ಜತೆ ಬಾಡಿಗೆ/ಲೀಸ್ ಒಪ್ಪಂದದ ಪ್ರತಿಯನ್ನು ಅಪ್ಲೋಡ್ ಮಾಡಬೇಕು. ‘ಕಾನ್ಸ್ಟಿಟ್ಯೂಷನ್ ಆಫ್ ಬಿಜಿನೆಸ್’ಗೆ ಸಂಬಂಧಿಸಿದಂತೆ ಅರ್ಜಿದಾರರು ಪಾಲುದಾರರಾಗಿದ್ದಲ್ಲಿ ಪಾಲುದಾರಿಕೆ ಒಪ್ಪಂದವನ್ನು ಅಪ್ಲೋಡ್ ಮಾಡಬೇಕು. ಉದ್ಯಮ್ ಸರ್ಟಿಫಿಕೇಟ್, ಎಂಎಸ್ಎಂಇ ಸರ್ಟಿಫಿಕೇಟ್, ಟ್ರೇಡ್ ಲೈಸೆನ್ಸ್ ಮುಂತಾಗಿ ಬೇರಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.
ನವದೆಹಲಿ: ಎರಡು ಸಾವಿರ ರೂ.ಗಿಂತ ಅಧಿಕ ಮೊತ್ತದ ಯುಪಿಐ ವಹಿವಾಟಿಗೆ ಜಿಎಸ್ಟಿ ಹಾಕಲಾಗುತ್ತದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ನಿರ್ದಿಷ್ಟ ಉಪಕರಣ ಬಳಸಿ ಮಾಡುವ ಪಾವತಿಗಳಿಗೆ ಸಂಬಂಧಿಸಿದಂತೆ ವ್ಯಾಪಾರಿ ರಿಯಾಯ್ತಿ ದರದಂತಹ (ಮರ್ಚಂಟ್ ಡಿಸ್ಕೌಂಟ್ ರೇಟ್- ಎಂಡಿಆರ್) ಶುಲ್ಕಗಳ ಮೇಲೆ ಜಿಎಸ್ಟಿ ಹಾಕಲಾಗುತ್ತದೆ. ವ್ಯಕ್ತಿಯಿಂದ ವ್ಯಾಪಾರಿಗೆ ನಡೆಸುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ ಅನ್ನು ಸಿಬಿಡಿಟಿ 2020ರ ಜನವರಿಯಿಂದ ತೆಗೆದುಹಾಕಿದೆ. ಯುಪಿಐ ವಹಿವಾಟುಗಳ ಮೇಲೆ ಸದ್ಯಕ್ಕೆ ಎಂಡಿಆರ್ ಇಲ್ಲದ ಕಾರಣ ಸಹಜವಾಗಿಯೇ ಈ ವಹಿವಾಟುಗಳಿಗೂ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.