ಲಂಡನ್: ಅಮೆರಿಕನ್ ಎಕ್ಸ್ಎಲ್ ಬುಲ್ಲಿ ಜಾತಿಯ ಪಿಟ್ಬುಲ್ ಶ್ವಾನವನ್ನು ಬ್ರಿಟನ್ನಲ್ಲಿ ಬ್ಯಾನ್ ಮಾಡಿ ಪ್ರಧಾನಿ ರಿಷಿ ಸುನಕ್ ಅವರು ಆದೇಶ ಹೊರಡಿಸಿದ್ದಾರೆ. ಈ ಜಾತಿಯ ಶ್ವಾನಗಳಿಂದ ನಡೆದ ಸರಣಿ ದಾಳಿಗಳ ಬಗ್ಗೆ ಸಾಷ್ಟು ವರದಿಯಾದ ಬೆನ್ನಲ್ಲೇ ಯುಕೆ ಪ್ರಧಾನಿ ಈ ಕ್ರಮ ತೆಗೆದುಕೊಂಡಿದ್ದಾರೆ.
ನಮ್ಮ ಸಮುದಾಯಗಳಿಗೆ ಅಮೆರಿಕನ್ ಎಕ್ಸ್ಎಲ್ ಬುಲ್ಲಿ ಶ್ವಾನಗಳು ಅಪಾಯಕಾರಿಯಾಗಿವೆ. ಅದರಲ್ಲೂ ಮಕ್ಕಳಿಗೆ ಇದರ ಬೆದರಿಕೆ ಹೆಚ್ಚಾಗಿದೆ ಎಂದು ಹೇಳಿರುವ ರಿಷಿ ಸುನಕ್, ಇತ್ತೀಚಿನ ನಾಯಿ ದಾಳಿಯ ವಿಡಿಯೋಗಳ ಮೂಲಕ "ರಾಷ್ಟ್ರದ ಭಯಾನಕ" ವನ್ನು ಹಂಚಿಕೊಂಡಿದ್ದಾರೆ.
ಇದು ಕೆಲವು ಕೆಟ್ಟ ತರಬೇತಿ ಪಡೆದ ನಾಯಿಗಳ ಬಗ್ಗೆ ಅಲ್ಲ. ಇದು ಅದರ ನಡವಳಿಕೆಯ ಕುರಿತಾಗಿದೆ. ಹೀಗಾಗಿ ಅದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ರಿಷಿ ಸುನಕ್ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ದಾಳಿಗಳನ್ನು ತಡೆಯುವ ಮಾರ್ಗಗಳ ಕುರಿತು ತಮ್ಮ ಸರ್ಕಾರವು ತುರ್ತಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಿಷಿ ಸುನಕ್ ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು. ಇದು ಪ್ರಸ್ತುತ ಕಾನೂನಿನಲ್ಲಿ ವ್ಯಾಖ್ಯಾನಿಸಲಾದ ತಳಿಯಲ್ಲ. ನಾವು ಅಪಾಯಕಾರಿ ನಾಯಿಗಳ ಕಾಯಿದೆಯಡಿಯಲ್ಲಿ ಈ ತಳಿಯನ್ನು ನಿಷೇಧಿಸುತ್ತೇವೆ. ಅಲ್ಲದೆ, ಈ ಕುರಿತು ಹೊಸ ಕಾನೂನುಗಳು ಜಾರಿಯಾಗಲಿವೆ ಎಂದು ರಿಷಿ ಸುನಕ್ ಶುಕ್ರವಾರ ಹೇಳಿದರು.
ಅಮೆರಿಕದ ಬುಲ್ಲಿ ನಾಯಿಯ ಸರಣಿ ದಾಳಿಯ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿದೆ. ಕಳೆದ ವಾರಾಂತ್ಯದಲ್ಲಿ, ಬರ್ಮಿಂಗ್ಹ್ಯಾಮ್ನಲ್ಲಿ ಬುಲ್ಲಿ ನಾಯಿಯ ದಾಳಿಯಿಂದ ಹುಡುಗಿಯೊಬ್ಬಳು ಗಾಯಗೊಂಡಿದ್ದಳು. ಅಲ್ಲದೆ, ಆಕೆಯನ್ನು ರಕ್ಷಿಸಲು ಬಂದ ಇನ್ನಿಬ್ಬರು ವ್ಯಕ್ತಿಗಳ ಮೇಲೂ ನಾಯಿ ದಾಳಿ ಮಾಡಿತ್ತು. ಸರಣಿ ದಾಳಿಗಳು ವರದಿಯಾಗುತ್ತಲೇ ಇದ್ದು, ಮುಂದಿನ ಅಪಾಯವನ್ನು ತಡೆಗಟ್ಟಲು ರಿಷಿ ಸುನಕ್ ಈ ಕ್ರಮ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)