ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂತ್ರಿ ಇಂದು (ಸೆ.10) ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆಯುತ್ತಿವೆ.
ದೆಹಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಆಗಮಿಸಿರುವ ಸುನಕ್, ಶುಕ್ರವಾರ (ಸೆ.08) ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮನ್ನು ತಾವು "ಹೆಮ್ಮೆಯ ಹಿಂದು" ಎಂದು ಹೇಳಿಕೊಂಡರು. ಅಲ್ಲದೆ, ದೆಹಲಿಯದ ದೇವಾಲಯಕ್ಕೆ ಭೇಟಿ ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಇಂದು ಬೆಳಗ್ಗೆ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ ಸುನಕ್ ದಂಪತಿ, ಸುಮಾರು ಒಂದು ಗಂಟೆಗಳ ಕಾಲ ಸಮಯ ಕಳೆದರು. ಅಲ್ಲದೆ, ದಂಪತಿ ಆರತಿ ಪೂಜೆ ಸಹ ಮಾಡಿದರು, ಸಂತರನ್ನು ಭೇಟಿಯಾಗಿದಲ್ಲದೆ, ದೇವಾಲಯದಲ್ಲಿರುವ ಎಲ್ಲಾ ವಿಗ್ರಹಗಳಿಗೆ ಪುಷ್ಪಗಳನ್ನು ಅರ್ಪಿಸಿದರು.
ಗಮನ ಸೆಳೆದ ಸಂಗತಿ ಏನೆಂದರೆ, ಸುನಕ್ ಅವರು ದೇವಸ್ಥಾನದೊಳಗೆ ಬರಿಗಾಲಿನಲ್ಲಿ ಹೋದರು. ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಿಂದೂಗಳು ಅನುಸರಿಸುವ ಸಂಪ್ರದಾಯವನ್ನು ಪಾಲಿಸಿದರು.
ಸುನಕ್ ದಂಪತಿ ಭೇಟಿಯ ಬಗ್ಗೆ ಅಕ್ಷರಧಾಮ ದೇವಸ್ಥಾನದ ನಿರ್ದೇಶಕರು ಮಾತನಾಡಿ, ದಂಪತಿಯನ್ನು ಭೇಟಿಯಾದ ನಂತರ, ಅವರು ಸನಾತನಕ್ಕೆ ತುಂಬಾ ಹತ್ತಿರವಾಗಿದ್ದಾರೆ ಎಂದು ನಮಗೆ ಅನಿಸಿತು ಎಂದಿದ್ದಾರೆ. ಅಲ್ಲದೆ, ಸುನಕ್ ದೇವಸ್ಥಾನದಲ್ಲಿ ಆರತಿ ಮಾಡಿದರು, ಸಂತರನ್ನು ಭೇಟಿ ಮಾಡಿದರು ಮತ್ತು ದೇವಾಲಯದಲ್ಲಿರುವ ಎಲ್ಲಾ ವಿಗ್ರಹಗಳಿಗೆ ಹೂವುಗಳನ್ನು ಅರ್ಪಿಸಿದರು ಎಂದು ನಿರ್ದೇಶಕರು ಬಹಿರಂಗಪಡಿಸಿದರು. ಅವರ ಪತ್ನಿಯೂ ಪೂಜೆ ನೆರವೇರಿಸಿದರು ಎಂದರು.
ದೇವಸ್ಥಾನದ ನಿರ್ದೇಶಕರು ಕೂಡ ಅವರಿಗೆ ಇಡೀ ದೇವಾಲಯವನ್ನು ಪರಿಚಯಿಸಿ, ದೇವಸ್ಥಾನದ ಮಾದರಿಯನ್ನು ಉಡುಗೊರೆಯಾಗಿ ನೀಡಿದರು.
ಅವರ ಆಗಮನಕ್ಕೂ ಮುನ್ನ ದೇವಾಲಯದಲ್ಲಿ ಅಗತ್ಯವಾದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಸ್ಥಾನದ ಏರಿಯಾದಲ್ಲಿ ಭದ್ರತಾ ಸಿಬ್ಬಂದಿಯ ದೊಡ್ಡ ಗುಂಪನ್ನು ನಿಯೋಜನೆ ಮಾಡಲಾಗಿತ್ತು.
ಹಿಂದಿನ ಶುಕ್ರವಾರ ಸುನಕ್ ಅವರು ಹಿಂದು ಹಬ್ಬ ರಕ್ಷಾ ಬಂಧನವನ್ನು ಆಚರಿಸಿದರು. ನಾನೊಬ್ಬ ಹೆಮ್ಮೆಯ ಹಿಂದು. ನಾನು ಹೀಗೆ ಬೆಳೆದಿದ್ದೇನೆ, ನಾನು ಹೀಗೇ ಇದ್ದೇನೆ ಮತ್ತು ಮುಂದೆಯೂ ಹೀಗೆ ಇರುತ್ತೇನೆ. ನಾನು ಮುಂದಿನ ಒಂದೆರಡು ದಿನಗಳಲ್ಲಿ ದೆಹಲಿಯಲ್ಲಿ ಇರುವ ಸಮಯದಲ್ಲಿ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಶುಕ್ರವಾರ ಹೇಳಿದರು.
ಶನಿವಾರ ಆರಂಭವಾಗಿರುವ ಎರಡು ದಿನಗಳ G20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಶುಕ್ರವಾರ ದೆಹಲಿಗೆ ಬಂದಿಳಿದರು. ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ರುದ್ರಾಕ್ಷಿ ಮಣಿಗಳು, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾವನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ರಿಷಿ ಸುನಕ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಶೃಂಗಸಭೆ ನಡೆಯುತ್ತಿರುವ ಕೇಂದ್ರ ದೆಹಲಿಯ ಪ್ರಗತಿ ಮೈದಾನದ ಸುತ್ತಮುತ್ತ ಬಹು ಪದರದ ಭದ್ರತೆಯನ್ನು ಹಾಕಲಾಗಿದೆ. ನವದೆಹಲಿ ಮತ್ತು ಗಡಿ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಕಠಿಣಗೊಳಿಸಲಾಗಿದೆ. (ಏಜೆನ್ಸೀಸ್)