ನ್ಯೂಸ್

ಅಮೆರಿಕದಲ್ಲಿ ಲಾಕ್​ಡೌನ್ ವಿರುದ್ಧ ಬೀದಿಗಿಳಿದ ಜನತೆ

vinaymk1969

ಕಂಕಾರ್ಡ್ (ಅಮೆರಿಕ): ಮನೆಯೊಳಗೇ ಇರುವುದರಿಂದ ಆರ್ಥಿಕತೆಗೆ ಆಗುವ ನಷ್ಟಕ್ಕೆ ಕಳವಳ ವ್ಯಕ್ತವಾಗುತ್ತಿದ್ದು, ಅಮೆರಿಕದಲ್ಲಿ ಲಾಕ್​ಡೌನ್ ವಿರುದ್ಧ ಚಳವಳಿ ಗರಿಗೆದರುತ್ತಿದೆ. ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯಲು ಹೇರಲಾಗಿರುವ ನಿರ್ಬಂಧಗಳನ್ನು ತೆರವು ಮಾಡುವಂತೆ ಆಗ್ರಹಿಸಿ

ಅಮೆರಿಕದ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನೆಗಳಿಗೆ ನೈತಿಕ ಬೆಂಬಲವಾಗಿದ್ದಾರೆನ್ನುವುದು ವಿಶೇಷ.

ಸುಮಾರು 400 ಜನರು ನ್ಯೂ ಹ್ಯಾಂಪ್​ಷೈರ್​ನ ಕಂಕಾರ್ಡ್​ನಲ್ಲಿ ಮಳೆಯಲ್ಲೇ ನಿಂತು ಹಾಗೂ ಕೆಲವರು ಕಾರುಗಳಲ್ಲೇ ಉಳಿದು ಪ್ರತಿಭಟನೆ ನಡೆಸಿದರು. ಕೋವಿಡ್-19 ಪ್ರಕರಣಗಳು ಕಡಿಮೆಯಿರುವ ನ್ಯೂಹ್ಯಾಂಪ್​ಷೈರ್​ನಂಥ ರಾಜ್ಯಗಳಲ್ಲಿ ವಿಸ್ತರಿತ ಕ್ವಾರಂಟೈನ್ ಅಗತ್ಯವಿಲ್ಲ ಎಂಬುದು ಪ್ರತಿಭಟನೆಕಾರರ ಪ್ರತಿಪಾದನೆ. ಪ್ರತಿಭಟನೆಕಾರರಲ್ಲಿ ಕೆಲವರು ಮಿಲಿಟರಿ ಸಮವಸ್ತ್ರದಂಥ ಉಡುಪು ಧರಿಸಿದ್ದು ಮುಖ ಮುಚ್ಚಿಕೊಂಡಿದ್ದರು.

ಅಮೆರಿಕದಲ್ಲಿ ಲಾಕ್​ಡೌನ್ ವಿಚಾರದಲ್ಲಿ ರಾಜಕೀಯ ವಿಭಜನೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಬೇಕೆನ್ನುವುದು ತಮ್ಮ ಅಭಿಮತ ಎಂದು ಅಧ್ಯಕ್ಷ ಟ್ರಂಪ್ ಮಾಡಿರುವ ಟ್ವೀಟ್, ಅವರ ಡೆಮಾಕ್ರಟಿಕ್ ಪಕ್ಷ ಆಡಳಿತದಲ್ಲಿರುವ ಹಲವು ರಾಜ್ಯಗಳಲ್ಲಿ ಪ್ರತಿಭಟನೆಕಾರರಿಗೆ ಪ್ರೇರಣೆಯಾಗಿದೆ. ಆದರೆ ರಿಪಬ್ಲಿಕನ್ ಪಕ್ಷ ಆಡಳಿತದಲ್ಲಿರುವ ಹ್ಯಾಂಪ್​ಷೈರ್ ಮತ್ತು ಟೆಕ್ಸಾಸ್​ನಲ್ಲಿ ಕೂಡ ಪ್ರತಿಭಟನೆಗಳು ನಡೆದಿವೆ.

ಟೆಕ್ಸಾಸ್​ನ ಆಸ್ಟಿನ್​ನಲ್ಲಿ 250ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದರು. ‘ಟೆಕ್ಸಾಸ್ ಪುನಾರಂಭಕ್ಕೆ ಇದು ಸಕಾಲ. ಜನರು ಕೆಲಸ ಮಾಡಲಿ. ಸ್ವಯಂಪ್ರೇರಣೆಯಿಂದ ಜನರು ಕಾರ್ಯ ನಿರ್ವಹಿಸಲಿ. ಸರ್ಕಾರದ ಬಲವಂತ ಬೇಡ’ ಎಂದು ಯಂಗ್ ಅಮೆರಿಕನ್ಸ್ ಫಾರ್ ಲಿಬರ್ಟಿ ಸಂಸ್ಥೆಯ ಜಸ್ಟಿನ್ ಗ್ರೇಸ್ ಹೇಳಿದರು.

ಬಡತನದಿಂದಲೂ ಸಾವು!: ಮೇರಿ ಲ್ಯಾಂಡ್​ನ ವಸಾಹತುಶಾಹಿ ಯುಗದ ಸರ್ಕಾರಿ ಕಟ್ಟಡ ಅನ್ನಾಪೊಲಿಸ್ ಬಳಿ ಕಾರಿನಲ್ಲೇ ಕುಳಿತು ಕೈಗಳನ್ನು ಬೀಸಿ ಪ್ರತಿಭಟನೆ ದಾಖಲಿಸಿದ ಜನರು, ‘ಬಡತನ ಕೂಡ ಜನರನ್ನು ಕೊಲ್ಲುತ್ತದೆ’ ಎಂಬ ಸಂದೇಶವುಳ್ಳ ಫಲಕಗಳನ್ನು ಪ್ರದರ್ಶಿಸಿದರು. ‘ನಾನು ಕೆಲಸ ಮಾಡದಿದ್ದರೆ ಹಸಿವಿನಿಂದ ಸಾಯಬೇಕಾಗುತ್ತದೆ’ ಎಂದು ಸೆಲೂನ್ ಒಂದರ ಮಾಲಕಿ ಡೊಲೊರೆಸ್ ಅಳಲು ತೋಡಿಕೊಂಡರು. ಮಾಲಿಕರಾಗಿರುವುದರಿಂದ ಅವರಿಗೆ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.

ಸ್ವತಂತ್ರ ಬದುಕು ಅಥವಾ ಸಾವು: ಅನೇಕ ನಗರಗಳಲ್ಲಿ ಅಮೆರಿಕದ ರಾಷ್ಟ್ರ ಧ್ವಜ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸುತ್ತಿರುವವರು ‘ಸ್ವತಂತ್ರ ಬಾಳ್ವೆ ಅಥವಾ ಸಾವು’ ಎಂಬ ಯುದ್ಧ ಕಾಲದ ಕ್ರಾಂತಿಕಾರಿ ಘೊಷಣೆ ಕೂಗುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಕರೊನಾ ಸೋಂಕು ಅಥವಾ ಸಾವಿನ ಸಂಖ್ಯೆ ಹೆಚ್ಚಿಲ್ಲದಿದ್ದರೂ ಲಾಕ್​ಡೌನ್ ಘೊಷಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ‘ನಾವು ನಮ್ಮ ಕೆಲಸ ಮಾಡುತ್ತೇವೆ. ಅದೇ ಹೊತ್ತಿಗೆ ಇದೊಂದು ಮುಕ್ತ ದೇಶವಾಗಿರಬೇಕು’ ಎಂದು ಅಮೆರಿಕದಾದ್ಯಂತ ಜನರು ಹೇಳುತ್ತಿದ್ದಾರೆ. ಅದರ ಉಲ್ಲಂಘನೆ ಯಾದಾಗ ಜನರು ಅದು ತಪ್ಪೆಂದು ಹೇಳಲು ಆರಂಭಿಸುತ್ತಾರೆ ಎಂದು ಪ್ರತಿಭಟನೆಕಾರ ಸ್ಕಿಪ್ ಮರ್ಫಿ ಹೇಳಿದ್ದಾರೆ.

ಮಾಡಿದ್ದುಣ್ಣೋ ಮಹಾರಾಯ: ಕರೊನಾ ವೈರಸ್ ಹರಡಲು ಚೀನಾ ‘ಗೊತ್ತಿದ್ದೇ ಹೊಣೆಯಾಗಿದ್ದಲ್ಲಿ’ ಅದು ತಕ್ಕ ಶಾಸ್ತಿ ಎದುರಿಸ ಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ‘ವೈರಸ್ ಚೀನಾದಲ್ಲಿ ಆರಂಭವಾದಾಗಲೇ ಅಲ್ಲಿಂದ ಹರಡುವುದನ್ನು ಅದು ತಡೆಯ ಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ’ ಎಂದು ಶ್ವೇತಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿ ದರು. ‘ಅದೊಂದು ತಪ್ಪು. ತಪ್ಪು ಯಾವತ್ತಿದ್ದರೂ ತಪ್ಪೇ’ ಎಂದು ಟ್ರಂಪ್ ಹೇಳಿದರು.

ಚೀನಾದಲ್ಲಿ ಹೆಚ್ಚು ಸಾವು: ಕರೊನಾ ವೈರಸ್ ರೋಗದಿಂದ ಅಮೆರಿಕದಲ್ಲಿ ಮೃತಪಟ್ಟವರಿಗಿಂತ ಚೀನಾದಲ್ಲೇ ಹೆಚ್ಚು ಜನರು ಸತ್ತಿದ್ದಾರೆ ಎಂಬುದು ಟ್ರಂಪ್ ಹೇಳಿದರು. ಸಾಂಕ್ರಾಮಿಕ ವ್ಯಾಧಿಯಿಂದ ಮೃತಪಟ್ಟವರ ನಿಜವಾದ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ ಎಂದವರು ಆರೋಪಿಸಿದರು. ‘ಕರೊನಾ ಸಾವಿನ ಸಂಖ್ಯೆಯಲ್ಲಿ ನಾವು ನಂಬರ್ ಒನ್ ಅಲ್ಲ. ಚೀನಾವೇ ನಂಬರ್ ಒನ್ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬಹುದು’ ಎಂದು ಟ್ರಂಪ್ ಹೇಳಿದರು. ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್​ನಂಥ ಆರೋಗ್ಯ ವ್ಯವಸ್ಥೆ ಉನ್ನತ ಮಟ್ಟದಲ್ಲಿರುವ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ಆದರೆ, ಚೀನಾದಲ್ಲಿ ಕೇವಲ ಶೇಕಡಾ 0.33 ಇದೆ ಎಂದು ಟ್ರಂಪ್ ವಿವರಿಸಿದರು. ಚೀನಾ ನೀಡಿರುವ ಸಾವಿನ ಅಧಿಕೃತ ಅಂಕಿಸಂಖ್ಯೆ ‘ಅವಾಸ್ತವಿಕ ಎಂದರು. ರೋಗ ಆರಂಭವಾದ ವುಹಾನ್ ನಗರದಲ್ಲಿ್ಲ ಸತ್ತವರ ಸಂಖ್ಯೆಗೆ 1300 ಜನರನ್ನು ಸೇರ್ಪಡೆ ಮಾಡಿದ ಎರಡೇ ದಿನಗಳಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.