ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿಯಿಟ್ಟು, ದಾಂಧಲೆ ಮಾಡಿದವರ ಮೇಲೆ ದಾಖಲಿಸಿದ್ದ ಕ್ರಿಮಿನಲ್ ದಾವೆ ಕೈಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತಿರುಗಿಬಿದ್ದಿದೆ. ಮೊದಲ ಹಂತವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಮತ್ತಿತರ ನಾಯಕರು ಭಾನುವಾರ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ ನಡೆ ನೋಡಿ ಮುಂದಿನ ಹೋರಾಟದ ಬಗ್ಗೆಯೂ ಸಮಾಲೋಚಿಸಿದ್ದು, ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರ ಮೊಂಡುವಾದ, ಪ್ರತಿಷ್ಠೆ ಬದಿಗಿಟ್ಟು ಕೇಸ್ ವಾಪಸ್ ನಿರ್ಧಾರ ರದ್ದುಪಡಿಸಿದರೆ ಸರಿ ಇಲ್ಲವಾದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಬಿಜೆಪಿ ಎಚ್ಚರಿಸಿದೆ.
ಗಲಭೆ ಸೃಷ್ಟಿಸಿದ ಆರೋಪಿಗಳೆಲ್ಲ ಮುಸ್ಲಿಮರಾಗಿದ್ದಾರೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೂ ಕಲ್ಲು ತೂರಿ ಗಾಯಗೊಳಿಸಿದ ದುಷ್ಕರ್ಮಿಗಳ ಬಗ್ಗೆ ಕಾಂಗ್ರೆಸ್‌ನ ಮೃದು ನೀತಿ, ಓಲೈಕೆ ರಾಜಕಾರಣದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕ್ರಿಮಿನಲ್ ಮೊಕದ್ದಮೆ ಕೈಬಿಟ್ಟ ರಾಜ್ಯ ಸರ್ಕಾರದ ನಿರ್ಧಾರ ಪೊಲೀಸರ ಆತ್ಮಸ್ಥೈರ್ಯ, ನಿಷ್ಪಕ್ಷಪಾತ ನಿಲುವಿಗೆ ಬಲವಾದ ಪೆಟ್ಟು ನೀಡಿದೆ. ಇಷ್ಟಕ್ಕೂ ಗಲಭೆಯ ಬಗ್ಗೆ ಎನ್‌ಐಎ ತನಿಖೆ ನಡೆಸಿ ಈಗಾಗಲೇ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಯಾಗಿದೆ.
ಕೋರ್ಟ್ ಅನುಮತಿಯಿಲ್ಲದೆ ಕೇಸ್ ವಾಪಸ್ ಪಡೆಯಲಾಗದು. ಇದು ಗೊತ್ತಿದ್ದೂ ಕ್ರಿಮಿನಲ್ ದಾವೆ ವಾಪಸ್ ನಿರ್ಧಾರವು ಮುಸ್ಲಿಮರ ಮೂಗಿಗೆ ತುಪ್ಪ ಸವರಲು ಮುಂದಾದಂತಿದೆ. ಉಪ ಚುನಾವಣೆ ಮೇಲೆ ಕಣ್ಣಿಟ್ಟು ಹೂಡಿರುವ ರಾಜಕೀಯ ತಂತ್ರಗಾರಿಕೆಯಾಗಿದೆ.
ಕೇಸ್ ವಾಪಸ್ ತೆಗೆದುಕೊಂಡರೆ ಪ್ರತಿಪಕ್ಷ ಬಿಜೆಪಿ ಆಕ್ಷೇಪಿಸುತ್ತದೆ. ಕೋರ್ಟ್ ಅನುಮತಿ ನೀಡುವ ಸಾಧ್ಯತೆಯಿಲ್ಲವೆಂದು ಲೆಕ್ಕಾಚಾರ ಮಾಡಿಯೇ ಕಾಂಗ್ರೆಸ್ ಸರ್ಕಾರ ಈ ಹೆಜ್ಜೆಯಿಟ್ಟಿದೆ ಎಂಬ ತರ್ಕ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಿಮ್ಮ ಪರವಾಗಿ ನಾವಿದ್ದೇವೆ ಎಂಬ ಸಂದೇಶವನ್ನು ಮುಸ್ಲಿಮರಿಗೆ ರವಾನಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ಮೂಲಗಳು ಕಟಕಿಯಾಡಿವೆ.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರುವುದು ಪೊಲೀಸರ ಸ್ಥೈರ್ಯ ಕುಗ್ಗಿಸಲಿದೆ. ಇದು, ಸಾಮಾನ್ಯ ಪ್ರಕರಣವೆ ? ಅಥವಾ ಹೋರಾಟದ ದಾವೆಯಾ ?. ಪಾಕಿಸ್ತಾನದಿಂದ ಅಕ್ರಮವಾಗಿ ಪ್ರವೇಶಿಸಿ ಮತಾಂತರ ಮಾಡಿದವರ ಕೇಸ್‌ನ್ನು ಸಿಎಂ, ಗೃಹ ಸಚಿವರು ವಾಪಸ್ ಪಡೆದುಬಿಡಲಿ. -ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಗಲಭೆಕೋರರ ವಿರುದ್ಧದ ಕ್ರಿಮಿನಲ್ ದಾವೆಯನ್ನು ರಾಜ್ಯ ಸರ್ಕಾರ ಹಿಂಪಡೆದದ್ದು ತುಷ್ಟೀಕರಣದ ಪರಾಕಾಷ್ಠೆ. ಈ ನಿರ್ಧಾರ ಕೈಬಿಡಲು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಲಿದ್ದು, ಸರ್ಕಾರ ಮಣಿಯದಿದ್ದರೆ ತೀವ್ರ ಹೋರಾಟ ಅನಿವಾರ್ಯವಾಗಲಿದೆ. -ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ.