ಅಹಮದಾಬಾದ್: ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತಿನ ಜಾಮ್ನಗರದಲ್ಲಿ ತಲೆಎತ್ತಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ನಿರ್ಮಾಣ ಮಾಡಲಿದೆ ಎಂಬ ವಿಚಾರವನ್ನು ಗುಜರಾತ್ನ ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಕೆ.ದಾಸ್ ಅಸೋಚಾಮ್ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಜಗತ್ತಿನ ಅತಿದೊಡ್ಡ ಪ್ರತಿಮೆ ಏಕತಾ ಪ್ರತಿಮೆ ಗುಜರಾತಿನಲ್ಲಿರುವಂತೆ, ಜಗತ್ತಿನ ಅತಿದೊಡ್ಡ ಮೃಗಾಲಯವೂ ಗುಜರಾತಿನಲ್ಲೇ ನಿರ್ಮಾಣವಾಗಲಿದೆ. ಒಂದೇ ಜಾಗದಲ್ಲಿ ಅತಿಹೆಚ್ಚು ಬಗೆಯ ಪ್ರಾಣಿ ಸಂಕುಲವಿರುವ ಮೃಗಾಲಯ ಇದಾಗಿರಲಿದ್ದು, ಜಾಮ್ನಗರದಲ್ಲಿ ನಿರ್ಮಾಣವಾಗಲಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ ಅಂಬಾನಿಯ ಕನಸಿನ ಪ್ರಾಜೆಕ್ಟ್ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಾಣ ನೆರವೇರಿಸಲಿದೆ.
ಇದಕ್ಕೆ ಈಗಾಗಲೇ ಸೆಂಟ್ರಲ್ ಝೂ ಅಥಾರಿಟಿ ಅನುಮತಿ ನೀಡಿದೆ. ಈ ಮೃಗಾಲಯಕ್ಕೆ ಗ್ರೀನ್ಸ್ ಝೂವಾಲಾಜಿಕಲ್ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಕಿಂಗ್ಡಂ ಎಂಬ ಹೆಸರು ಇರಲಿದೆ. 250.1 ಎಕರೆ ಪ್ರದೇಶದಲ್ಲಿ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರಿಯ ಮೋಟಿ ಖಾವ್ಡಿ ರಿಫೈನರಿ ಪ್ರಾಜೆಕ್ಟ್ ಸಮೀಪದಲ್ಲೇ ಈ ಮೃಗಾಲಯ ಇರಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಸೆಂಟ್ರಲ್ ಝೂ ಅಥಾರಿಟಿಯ ವೆಬ್ಸೈಟ್ನಲ್ಲಿದೆ ಎಂದು ದಾಸ್ ಹೇಳಿದ್ದಾರೆ. (ಏಜೆನ್ಸೀಸ್ )