ನವದೆಹಲಿ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ದಿಗ್ಗಜ ಕಂಪನಿ ಎನಿಸಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯ ಶೇ.6.2 ಹೆಚ್ಚಾಗುತ್ತಿದ್ದಂತೆ, ಹೊಸ ದಾಖಲೆಯನ್ನೇ ಬರೆದಿದೆ.
ತೈಲದಿಂದ ಟೆಲಿಕಾಮ್ವರೆಗೆ ಹರಡಿಕೊಂಡಿರುವ ರಿಲಯನ್ಸ್ ಕಂಪನಿ ಮಾರುಕಟ್ಟೆ ಬಂಡವಾಳ ಮೌಲ್ಯವು 200 ಬಿಲಿಯನ್ ಡಾಲರ್ಗೂ ಹೆಚ್ಚಾಗಿದೆ. ಈ ಶ್ರೇಯ ಪಡೆದ ಭಾರತದ ಮೊದಲ ಕಂಪನಿ ಇದಾಗಿದೆ. ಜತೆಗೆ, ಎರಡನೇ ಸ್ಥಾನದಲ್ಲಿರುವ ಕಂಪನಿಗಿಂತ ಇದರ ಗಾತ್ರ ದುಪ್ಪಟ್ಟಾಗಿದೆ.
ರಿಲಯನ್ಸ್ ಕಂಪನಿಗೆ ಬಂಡವಾಳದ ಮಹಾಪೂರವೇ ಹರಿದು ಬರುತ್ತಿದೆ. ಹೀಗಾಗಿ ಕಂಪನಿಯ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿ ಷೇರಿನ ಬೆಲೆ 2,343.90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಇದರ ಮಾರುಕಟ್ಟೆ ಬಂಡವಾಳ 14.68 ಲಕ್ಷ ಕೋಟಿ ರೂ. ( 200.68 ಬಿಲಯನ್ ಡಾಲರ್) ಆಗಿದೆ.
ಎರಡನೇ ಸ್ಥಾನದಲ್ಲಿರುವ ಟಿಸಿಎಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಪ್ರಮಾಣ 119 ಬಿಲಿಯನ್ ಡಾಲರ್ಗೆ ಹೋಲಿಸಿದಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ ಎಂದೇ ಹೇಳಬಹುದು.
ಫೇಸ್ಬುಕ್-ಗೂಗಲ್ನಿಂದ 20 ಬಿಲಿಯನ್ ಬಂಡವಾಳ ಪಡೆದ ಬೆನ್ನಲ್ಲೇ, ಇತ್ತೀಚೆಗೆ ಸಿಲ್ವರ್ ಲೇಕ್ ಕಂಪನಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಜತೆಗೆ ಅಮೆರಿಕದ ಕೆಕೆಆರ್, ಅಬುದಾಬಿ, ದುಬೈನ ಹಲವು ಕಂಪನಿಗಳು ಹೂಡಿಕೆಗೆ ಮುಂದಾಗಿವೆ.
ಇನ್ನೊಂದೆಡೆ, ರಿಲಯನ್ಸ್ನಲ್ಲಿ 1.46 ಲಕ್ಷ ಕೋಟಿ ರೂ. (20 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಅಮೆಜಾನ್ ಮಾತುಕತೆ ನಡೆಸುತ್ತಿದೆ. ಹೀಗಾದಲ್ಲಿ ಕಂಪನಿಯ ಷೇರು ಮೌಲ್ಯ 2,464ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.