ನ್ಯಾ.ನಾಗಮೋಹನ್ ದಾಸ್ ವರದಿ ರದ್ದು ಮಾಡುವಂತೆ ಒತ್ತಾಯಿಸಿ ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಎಚ್.ಡಿ.ಕೋಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. 
ನ್ಯೂಸ್

ಬಲಗೈ ಸಮುದಾಯದ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ

ಎಚ್.ಡಿ.ಕೋಟೆ: ನ್ಯಾ.ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದ್ದು ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ವರದಿಯನ್ನು ರದ್ದು ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ತಾಲೂಕು ಬಲಗೈ ಸಮುದಾಯದ ಒಕ್ಕೂಟ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಿಂದ ಹುಣಸೂರು-ಬೇಗೂರು ರಸ್ತೆ ಮೂಲಕ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಬಾಪೂಜಿ ವೃತ್ತ, ಸಾರಿಗೆ ಬಸ್ ನಿಲ್ದಾಣದ ಮುಂಭಾಗ, ತಾಲೂಕು ಆಡಳಿತ ಸೌಧದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ನಾಗಮೋಹನ್ ದಾಸ್ ವರದಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ನಂತರ ತಾಲೂಕು ಆಡಳಿತಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ನಾಗಮೋಹನ್ ದಾಸ್ ವರದಿ ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿದೆ. ಇದರಿಂದ ಸಮುದಾಯದ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದಿ ಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ಹೈರಿಗೆ ಶಿವರಾಜು ಮಾತನಾಡಿ, ಬಲಗೈ ಸಮುದಾಯ ಸುದಾರಣೆಯಾಗುತ್ತಿರುವುದನ್ನೇ ಸಹಿಸದ ಜಾತಿವಾದಿಗಳು ಒಳಮೀಸಲಾತಿ ಹೆಸರಿನಲ್ಲಿ ಸಂಪೂರ್ಣ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಲು ಹುನ್ನಾರ ನಡೆಸುತ್ತಿದೆ. ಬಲಗೈ ಸಂಬಂಧಿತ ಜಾತಿಗಳ ಈಗಿನ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ದೂರಿದರು.
ದೇಶದ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಬಲಗೈ ಸಂಬಂಧಿತ ಜಾತಿಗಳು ಶತಮಾನಗಳಿಂದ ಶಿಕ್ಷಣ, ಉದ್ಯೋಗ ಮತ್ತು ಅಧಿಕಾರಗಳಿಂದ ವಂಚಿತರಾಗಿದ್ದೆವು. ಅಂಬೇಡ್ಕರ್ ಅವರ ನಿರಂತರ ಶ್ರಮದಿಂದ ದೊರೆತ ಮೀಸಲಾತಿಯಿಂದ ಈಗಷ್ಟೆ ಒಂದೆರಡು ತಲೆಮಾರಿನಿಂದ ಶಿಕ್ಷಣ, ಉದ್ಯೋಗ ಕೆಲವೇ ಸೀಮಿತ ಅಧಿಕಾರಿಗಳನ್ನು ಪಡೆದಿವೆ. ಅದನ್ನು ಸಹಿಸದ ಜಾತಿಯ ಮನಸ್ಸುಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮನಹಳ್ಳಿ ಸೋಮೇಶ್ ಮಾತನಾಡಿ, ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ. ಈ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ವರ್ಗದ 19 ಜಾತಿಗಳಿಗೆ ಹಾಗೂ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜನರಿಗೆ ಸಾಮಾಜಿಕವಾಗಿ ಅನ್ಯಾಯವಾಗುತ್ತದೆ ಎಂದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜಣ್ಣ, ನಿಂಗರಾಜು, ಶಿವಣ್ಣ, ಸಣ್ಣ ಕುಮಾರ್, ಮಲ್ಲೇಶ್, ಸಿದ್ದರಾಜು, ಮಹದೇವು, ಪುಟ್ಟಂಆದು, ಪ್ರಕಾಶ, ಲೋಕೇಶ, ಗ್ರಾಮೀಣ ಮಹೇಶ್, ಗೋಪಾಲಸ್ವಾಮಿ, ಚಂದ್ರಶೇಖರ ಮೂರ್ತಿ, ಮಂಚಯ್ಯ, ಹೊಸಮಾಳ ರಾಜಣ್ಣ, ಪ್ರಕಾಶ ಬುದ್ಧ, ಅನುಷಾ, ಶ್ರೀನಿವಾಸ, ಚಂದ್ರು, ಶಿವಣ್ಣ, ನಾಗಣ್ಣ, ಮಾದೇವು, ಶಿವರಾಜು, ರಾಜೇಶ್, ಸಿದ್ದರಾಜು ಇದ್ದರು.
ಹಕ್ಕೊತ್ತಾಯಗಳು
1. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿ ಕಾರ್ಯ ಚಟುವಟಿಕೆಗಳಿಗೆ ಶೀಘ್ರ ತಡೆಯಾಜ್ಞೆ ನೀಡುವುದು.
2.ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸುವುದು ಮತ್ತು ಹಳೆಯ ಜಾತಿ ಪ್ರಮಾಣ ಪತ್ರವನ್ನೇ ಮುಂದುವರಿಸುವುದು.
3. ಒಳಮೀಸಲಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸುವುದು.
4.ಗೊಂದಲಗಳು ಪರಿಹಾರವಾಗುವ ತನಕ ಹಳೆಯ ಮೀಸಲು ಅನ್ವಯಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು.
5.ಜಾತಿಗಣತಿಯನ್ನು ಕೂಡಲೇ ಬಿಡುಗಡೆ ಮಾಡುವುದು.
6.ಮೀಸಲಾತಿ ಪಡೆಯುವ ಎಲ್ಲ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡುವುದು ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದು.