ನ್ಯೂಸ್

ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಹಕ್ಕು

ನವದೆಹಲಿ: ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಕ್ರಿಮಿನಲ್ ಕೋಡ್ ಪೊ›ಸೀಜರ್) ಸೆಕ್ಷನ್ 125ರ ಅಡಿಯಲ್ಲಿ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ದ್ವಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.

ಸೆಕ್ಷನ್ 125 ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಜೀವನಾಂಶವನ್ನು ಕೋರುವ ಕಾನೂನು ಎಲ್ಲಾ ಧರ್ಮದ ಎಲ್ಲಾ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ನ್ಯಾ. ನಾಗರತ್ನ ತೀರ್ಪಿನಲ್ಲಿ ದಾಖಲಿಸಿದ್ದಾರೆ. ಜೀವನಕ್ಕೆ ಅನುಕೂಲಕರ ಸಂಪನ್ಮೂಲ, ಆಸ್ತಿ ಹೊಂದಿರುವ ವ್ಯಕ್ತಿ ತನ್ನ ಹೆಂಡತಿ, ಮಕ್ಕಳು ಅಥವಾ ಪೋಷಕರಿಗೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ ಎಂದು ಸೆಕ್ಷನ್ 125 ಸ್ಪಷ್ಟವಾಗಿ ತಿಳಿಸುತ್ತದೆ. ಪತ್ನಿಯ ಜೀವನ ನಿರ್ವಹಣೆಗೆ ಹಣ ನೀಡುವುದು ದಾನದ ವಿಷಯವಲ್ಲ. ಇದು ವಿವಾಹಿತ ಮಹಿಳೆಯರ ಮೂಲಭೂತ ಹಕ್ಕು. ಈ ಹಕ್ಕು ಧಾರ್ವಿುಕ ಗಡಿಗಳನ್ನು ಮೀರಿದೆ, ಎಲ್ಲಾ ವಿವಾಹಿತ ಮಹಿಳೆಯರಿಗೆ ಲಿಂಗ ಸಮಾನತೆ ಮತ್ತು ಆರ್ಥಿಕ ಭದ್ರತೆಯ ತತ್ವವನ್ನು ಬಲಪಡಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಗೃಹಿಣಿಯಾಗಿರುವ ಹೆಂಡತಿ ಭಾವನಾತ್ಮಕವಾಗಿ ಮತ್ತು ಇತರೆ ರೀತಿಯಲ್ಲಿ ಈ ಜೀವನಾಂಶಕ್ಕೆ ಅವಲಂಬಿತಳಾಗಿದ್ದಾಳೆ ಎಂಬ ಅಂಶದ ಬಗ್ಗೆ ಕೆಲವು ಗಂಡಂದಿರಿಗೆ ಅರಿವಿರುವುದಿಲ್ಲ. ಕುಟುಂಬದಲ್ಲಿ ಗೃಹಿಣಿಯರ ಪಾತ್ರ ಮತ್ತು ತ್ಯಾಗವನ್ನು ಗುರುತಿಸುವ ಸಮಯ ಭಾರತದ ಪುರುಷರಿಗೆ ಬಂದಿದೆ ಎಂದು ತೀರ್ಪಿನಲ್ಲಿ ದಾಖಲಿಸಲಾಗಿದೆ.

ಪ್ರಕರಣ ಏನಿತ್ತು? : ವಿಚ್ಛೇದಿತ ಪತ್ನಿಗೆ ಮಾಸಿಕ ರೂ 20,000 ನೆರವು ನೀಡುವಂತೆ ಕೌಟುಂಬಿಕ ನ್ಯಾಯಾಲಯ ಸೂಚಿಸಿದ್ದನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಎಂಬವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಮಹತ್ವದ ತೀರ್ಪು ಹೊರಬಿದ್ದಿದೆ. ಈ ತೀರ್ಪನ್ನು ಸಮದ್ ತೆಲಂಗಾಣ ಹೈಕೋರ್ಟ್ನಲ್ಲೂ ಪ್ರಶ್ನಿಸಿದ್ದರು. ಜೀವನಾಂಶ ನೀಡುವ ನಿರ್ದೇಶನವನ್ನು ಹೈಕೋರ್ಟ್ ಎತ್ತಿಹಿಡಿದಿತ್ತಾದರೂ, ಮೊತ್ತವನ್ನು ರೂ. 10,000ಕ್ಕೆ ಮಾರ್ಪಡಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಮದ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ವೈಯಕ್ತಿಕ ಅಗತ್ಯಕ್ಕೆ ನೀಡಬೇಕು: ಕುಟುಂಬದಲ್ಲಿ ಗೃಹಿಣಿಯರ ಪಾತ್ರವನ್ನು ಒತ್ತಿಹೇಳಿರುವ ನ್ಯಾಯಾಲಯ, ಗಂಡಂದಿರು ತಮ್ಮ ಹೆಂಡತಿಯರಿಗೆ ಆರ್ಥಿಕ ನೆರವು ನೀಡುವುದು ಅಗತ್ಯ. ಭಾರತದ ವಿವಾಹಿತ ಪುರುಷ ತನ್ನ ಹೆಂಡತಿಯನ್ನು ಆರ್ಥಿಕವಾಗಿ ಸಬಲಳಾಗುವಂತೆ ಮಾಡಬೇಕು ಮತ್ತು ಸ್ವತಂತ್ರ ಆದಾಯದ ಮೂಲವನ್ನು ಹೊಂದಿರದ ಹೆಂಡತಿಗೆ, ವಿಶೇಷವಾಗಿ ಅವಳ ವೈಯಕ್ತಿಕ ಅಗತ್ಯಗಳಿಗಾಗಿ ಹಣಕಾಸಿನ ಸಂಪನ್ಮೂಲ ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾ. ನಾಗರತ್ನ ತೀರ್ಪಿನಲ್ಲಿ ಹೇಳಿದ್ದಾರೆ. ಇಂತಹ ಆರ್ಥಿಕ ಸಬಲೀಕರಣವು ದುರ್ಬಲ ಹೆಂಡತಿಯನ್ನು ಕುಟುಂಬದಲ್ಲಿ ಹೆಚ್ಚು ಸುರಕ್ಷಿತ ಸ್ಥಾನದಲ್ಲಿ ಇರಿಸುತ್ತದೆ. ಈ ವಿಷಯದ ಬಗ್ಗೆ ಅರಿವಿರುವ ಪುರುಷರು ತಮ್ಮ ಸಂಗಾತಿಯ ವೈಯಕ್ತಿಕ ವೆಚ್ಚಗಳಿಗಾಗಿ ಹಣಕಾಸಿನ ನೆರವನ್ನು ಖಚಿತಪಡಿಸುತ್ತಾರೆ. ಜಂಟಿ ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಅಥವಾ ಎಟಿಎಂ ಕಾರ್ಡ್ ನೀಡುವ ಮೂಲಕ ಆಕೆಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ ಎಂದೂ ತೀರ್ಪಿನಲ್ಲಿ ತಿಳಿಸಿದ್ದಾರೆ.