ನ್ಯೂಸ್

ನಿವೇಶನ ನೋಂದಣಿಯಾಗಿದ್ದರೆ ಮಾತ್ರ ಹಕ್ಕು ಲಭ್ಯ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಕೇವಲ ನಿವೇಶನ ಹಂಚಿಕೆ, ನಿವೇಶನದ ಮೇಲೆ ಯಾವುದೇ ಹಕ್ಕು ನೀಡುವುದಿಲ್ಲ. ಹಂಚಿಕೆಯಾಗಿದ್ದ ನಿವೇಶನ ನೋಂದಣಿಯಾಗಿದ್ದರೆ ಮಾತ್ರ ಅದರ ಮೇಲಿನ ಹಕ್ಕು ಲಭ್ಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣ ಸಂಬಂಧ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆದಿಲಕ್ಷ್ಮಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಪ್ರಸ್ತುತ ಪ್ರಕರಣದಲ್ಲಿ ಕೆ.ತಿಪ್ಪಣ್ಣ ಅವರಿಗೆ ನಿವೇಶನ ಹಂಚಿಕೆಯಾಗಿತ್ತು. ಆದರೆ ಅದರ ನೋಂದಣಿಗೂ ಮುನ್ನ ಅವರು ಸಾವನ್ನಪ್ಪಿದ್ದಾರೆ ಮತ್ತು ಆನಂತರ ಪ್ರಾಧಿಕಾರಕ್ಕೆ ಹಣ ಪಾವತಿಸಿದ ನಂತರ ಮೂಲ ಹಂಚಿಕೆದಾರರ ಪತ್ನಿ ಹೆಸರಿಗೆ ನಿವೇಶನವನ್ನು ನೋಂದಣಿ ಮಾಡಿಕೊಡಲಾಗಿದೆ.

ಹಾಗಾಗಿ ಹಿಂದೂ ಉತ್ತರದಾಯಿತ್ವ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ ಆ ನಿವೇಶನದ ಮೂಲ ಮಾಲೀಕರು ಲಕ್ಷ್ಮಮ್ಮ ಅವರಾಗಾಗಲಿದ್ದಾರೆ. ಕೆ.ತಿಪ್ಪಣ್ಣಗೆ ನಿವೇಶನ ಹಂಚಿಕೆ ಮಾಡಲಾಗಿತ್ತಾದರೂ ನೋಂದಣಿ ಆಗಿಲ್ಲವಾದ್ದರಿಂದ ಅವರಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕು ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಆಸ್ತಿಯು ಕುಟುಂಬದ ಮುಖ್ಯಸ್ಥ ಕೆ.ತಿಪ್ಪಣ್ಣ ಅವರಿಗೆ ಹಂಚಿಕೆಯಾಗಿತ್ತು, ಅವರ ಪುತ್ರ ಕೆ.ಮಹದೇವ ಅವರ ಒಪ್ಪಿಗೆ ಮೇರೆಗೆ ಬಿಡಿಎ ನಿವೇಶನವನ್ನು ತಿಪ್ಪಣ್ಣ ಅವರ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿಕೊಟ್ಟಿದೆ. ಆದ್ದರಿಂದ ಸಹ ಪಾಲುದಾರರಾದ ಕೆ.ಲಕ್ಷ್ಮಮ್ಮ ಇಡೀ ಆಸ್ತಿಯನ್ನು ವಿಲ್ ಮಾಡಲು ಬರುವುದಿಲ್ಲ. ಎಲ್ಲ ಕಾನೂನು ಬದ್ಧ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗಬೇಕು’ ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರಾದ ಸೊಸೆ ನಿವೇಶನ ಖರೀದಿಗೆ ಹಣ ನೀಡಿದ್ದರೂ ಆಕೆಗೆ ಆಸ್ತಿಯ ಮೇಲೆ ಹಕ್ಕು ಹೊಂದಿರುವುದಿಲ್ಲ. ಒಂದು ವೇಳೆ ಆಸ್ತಿಯನ್ನು ಪಾಲು ಮಾಡಿದರೂ ತಿಪ್ಪಣ್ಣನ ಪುತ್ರನಾದ ಕೆ.ಮಹದೇವ ಜೀವಂತವಾಗಿರುವುದರಿಂದ ಅದರಲ್ಲಿ ಆತನ ಪತ್ನಿಗೆ ಪಾಲು ಬರುವುದಿಲ್ಲ. ಆದ್ದರಿಂದ ಅಧೀನ ನ್ಯಾಯಾಲಯ ಅರ್ಜಿ ವಜಾಗೊಳಿಸಿರುವ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ)

ಬಿಡಿಎಯಿಂದ ನಗರದ ಕೆ.ತಿಪ್ಪಣ್ಣ ಅವರಿಗೆ 1976-77ರಲ್ಲಿ ನಿವೇಶನ ಹಂಚಿಕೆಯಾಗಿತ್ತು,ಆದರೆ ಅದು ನೋಂದಣಿಯಾಗುವ ಮುನ್ನವೇ ಅವರು ಸಾವನ್ನಪ್ಪಿದ್ದರು. ಆದರೂ ಕಾನೂನು ಬದ್ಧ ವಾರಸುದಾರರೆಲ್ಲಾ ಸೇರಿ ತಿಪ್ಪಣ್ಣ ಅವರ ಪತ್ನಿಗೆ ನಿವೇಶನ ನೀಡಲು ಒಪ್ಪಿದ್ದರು. ಅದರಂತೆ ಬಿಡಿಎ 1998ರಲ್ಲಿ ತಿಪ್ಪಣ್ಣ ಪತ್ನಿ ಲಕ್ಷ್ಮಮ್ಮಗೆ ನೋಂದಣಿ ಮಾಡಿಕೊಟ್ಟಿದ್ದರು. ಲಕ್ಷ್ಮಮ್ಮ ಆ ಆಸ್ತಿಯನ್ನು ಕೆ.ಚಿದಾನಂದ ಎಂಬುವರಿಗೆ ವಿಲ್ ಮಾಡಿದ್ದರು, ಅವರು ಅದನ್ನು ಅನುಭವಿಸುತ್ತಿದ್ದಾರೆ.

ಆದರೆ ತಿಪ್ಪಣ್ಣನ ಮಗ ಮಹದೇವನ ಪತ್ನಿ ಆದಿಲಕ್ಷ್ಮಮ್ಮ ತನಗೆ ಆಸ್ತಿ ಸೇರಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅದನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು, ಹಾಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.