ನ್ಯೂಸ್

ದೇವೇಗೌಡರ ಆರೋಗ್ಯದ ಬಗ್ಗೆ ಅಪಹಾಸ್ಯ; ಡಿ.ಕೆ.ಸುರೇಶ್ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಂಬುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರು ಬರುತ್ತಿರುವುದು ಮೊಮ್ಮಗನ ಪಟ್ಟಾಭಿಷೇಕಕ್ಕೆ ಎನ್ನುತ್ತಿದ್ದಾರೆ. ಈ ರೀತಿಯ ಸಣ್ಣತನದ ಮಾತಿಗೆ ಕಾಲವೇ ಉತ್ತರ ಕೊಡುತ್ತದೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಜೆಡಿಎಸ್ ತಿರುಗೇಟು

ದೇವೇಗೌಡರು ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು, ಅವರ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡಿರುವ ಡಿ.ಕೆ.ಸುರೇಶ್‌ಗೆ ಜೆಡಿಎಸ್, ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ತಿರುಗೇಟು ನೀಡಿದೆ.

ರೈತನಾಯಕ, ನೀರಾವರಿಗಳ ಹರಿಕಾರರು, ಮಾಜಿ ಪ್ರಧಾನಿ ದೇವೇಗೌಡರು ನಾಡಿಗೆ ಕೊಟ್ಟಿರುವ ಕೊಡುಗೆಗಳು ಅಪಾರ. ದೇವೇಗೌಡರು ಹುಟ್ಟು ಹೋರಾಟಗಾರರು. ಕಾಂಗ್ರೆಸ್ ಮತ್ತು ತಾವು ಮರೆತಿರಬಹುದು ಹಿಂದೆ ಚನ್ನಪಟ್ಟಣದ ವಿಟ್ಲೇನಹಳ್ಳಿ ಗೋಲಿಬಾರ್ ನಿಮ್ಮದೇ ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಆಗಲೂ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ರೈತರಿಗೆ ನ್ಯಾಯ ಕೊಡಿಸಲು ಪಾದಯಾತ್ರೆ ಮಾಡಿದ್ದರು ಎಂದು ಹೇಳಿದೆ.

ಆತ್ಮಸಾಕ್ಷಿ ಪ್ರಶ್ನೆ ಮಾಡಿಕೊಳ್ಳಿ

ಇಳಿ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮತ್ತು ದೇಶದ ರೈತರ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವರ ಬಗ್ಗೆ ಲಘುವಾಗಿ ಮಾತಾಡಿರುವ ನೀವು, 2 ಬಾರಿ ಸಂಸದರಾಗಿ ಲೋಕಸಭೆಯಲ್ಲಿ ನೀರಾವರಿ, ರೈತರು ಹಾಗೂ ನಾಡಿನ ಸಮಸ್ಯೆಗಳ ಬಗ್ಗೆ ಎಷ್ಟು ಮಾತನಾಡಿದ್ದೀರಿ? ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆಮಾಡಿಕೊಳ್ಳಿ ಮಿಸ್ಟರ್ ಸುರೇಶ್ ಎಂದು ಜೆಡಿಎಸ್ ಕೆಣಕಿದೆ.

ದೇವೇಗೌಡರು ತಂದಿರುವ ನೀರಾವರಿ ಯೋಜನೆಗಳು, ಜಲಾಶಯಗಳ ನಿರ್ಮಾಣ ಕುರಿತು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ರಾಜ್ಯದ ನದಿಗಳು-ನೀರಾವರಿ ಹೋರಾಟಗಳ ಬಗ್ಗೆ ಸಂಸತ್ತಿನಲ್ಲಿ ಈಗಲು ದೇವೇಗೌಡರು ಮಾತಾನಾಡುತ್ತಲೇ ಇದ್ದಾರೆ. ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿರುವ ಕೃತಜ್ಞತೆ ಇಲ್ಲದ ಆ ಮಾಗಡಿ ಶಾಸಕ, ಮೊದಲ ಬಾರಿಗೆ ಜನಪ್ರತಿನಿಧಿಯಾಗಿದ್ದು ಯಾರ ಕೃಪೆಯಿಂದ ಎಂಬುದು ಜನತೆಗೆ ಗೊತ್ತಿದೆ. ಕಾಂಗ್ರೆಸ್ ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ರಾಜ್ಯ ನಾಯಕರಿಗೆ ಮೊದಲು ಕಲಿಸಲಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.