ಸಿ.ಜಿ. ಪುನೀತ್ ಚಪ್ಪರದಹಳ್ಳಿ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಿಂದ ಆವರ್ತಿ ಮಾರ್ಗವಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದ ಹಲವೆಡೆ ಗುಂಡಿಬಿದ್ದ ಪರಿಣಾಮ ವಾಹನ ಸವಾರರು ಹರ ಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.
ಬೆಟ್ಟದಪುರದಿಂದ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ಗ್ರಾಮಕ್ಕೆ ಪಟ್ಟಣ ಸಮೀಪ ಇರುವುದರಿಂದ ಈ ವ್ಯಾಪ್ತಿಯ ಜನರು ವ್ಯಾಪಾರ, ಆಸ್ಪತ್ರೆ, ಕೂಲಿ ಕೆಲಸ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಅಲ್ಲದೆ ಪ್ರಮುಖ ರಸ್ತೆಯಾಗಿರುವ ಹಿನ್ನೆಲೆ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ.
ರಸ್ತೆಯಲ್ಲಿಯೇ ಬಾಯ್ತೆರೆದ ಗುಂಡಿಗಳು: ಸುಮಾರು ನಾಲ್ಕೈದು ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣವಾಗಿದ್ದು, ನಿರಂತರ ಮಳೆ ಹಾಗೂ ಭಾರಿ ವಾಹನಗಳ ಸಂಚಾರದಿಂದ ಹಸುವಿನಕಾವಲು, ಚಿಕ್ಕನೇರಳೆ ಸೇರಿದಂತೆ ಹಲವೆಡೆ ಬೃಹತ್ ಗಾತ್ರದ ಗುಂಡಿಗಳು ಬಾಯ್ತೆರೆದಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ಗುಂಡಿಯಾವುದು ರಸ್ತೆಯಾವುದು ಎಂಬುದೇ ಗೊತ್ತಾಗುವುದಿಲ್ಲ. ಅಲ್ಲದೆ ಪಾದಚಾರಿಗಳಿಗೆ ಕೆಸರಿನ ಅಭಿಷೇಕ ಆಗುತ್ತಿದೆ. ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡಿದಂತೆ ತೆರಳಬೇಕಾಗಿದೆ.
ಭಾರಿ ವಾಹನಗಳ ಸಂಚಾರ: ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಇರುವ ಕಲ್ಲಿನ ಕ್ವಾರಿ ಹಾಗೂ ಕ್ರಷರ್‌ಲಾರಿಗಳು ನಿತ್ಯ ಸಂಚರಿಸುವುದರಿಂದ ರಸ್ತೆ ಆಗಿಂದಾಗ್ಗೆ ಕಿತ್ತು ಬರುತ್ತಿದೆ. ನಿರಂತರ ಲಾರಿಗಳ ಓಡಾಟದಿಂದಲೂ ರಸ್ತೆ ಬೇಗ ಕಿತ್ತು ಬರುತ್ತಿದೆ. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ತುಂಬಿಕೊಂಡು ಓಡಾಡುವುದರಿಂದ ರಸ್ತೆಯಲ್ಲಿ ಇತರೆ ವಾಹನಗಳಿಗೆ ದಾರಿ ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಸಂಬಂಧಪಟ್ಟ ಸಾರಿಗೆ ಆಯುಕ್ತರು ಹಾಗೂ ಸ್ಥಳೀಯ ಆಡಳಿತ ಗಮನಹರಿಸಬೇಕು ಎಂಬೂದು ಸ್ಥಳೀಯರ ಒತ್ತಾಯವಾಗಿದೆ.
ರೈತರ ಓಡಾಟಕ್ಕೂ ಸಮಸ್ಯೆ: ಇದು ಕೃಷಿ ಚಟುವಟಿಕೆಗಳ ಪ್ರದೇಶವಾಗಿದ್ದು, ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು ಹಾಗೂ ಶುಂಠಿಯನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ರೈತರು ಮುರಿದ ತಂಬಾಕು ಎಲೆಗಳನ್ನು ಟ್ರಾೃಕ್ಟರ್ ಹಾಗೂ ಎತ್ತಿನ ಗಾಡಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ತಮ್ಮ ಬ್ಯಾರನ್ ಮನೆಗೆ ಕೊಂಡೊಯ್ಯಬೇಕಾಗಿದ್ದು, ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ, ರಸ್ತೆಯಲ್ಲಿ ಗುಂಡಿಗಳು ಉಂಟಾಗಿರುವ ಪರಿಣಾಮ ರೈತರಿಗೂ ಓಡಾಡಲು ಸಾಕಷ್ಟು ಸಮಸ್ಯೆ ಉಂಟಾಗಿ ಕೃಷಿ ಚಟುವಟಿಕೆಗೂ ಒಂದಿಷ್ಟು ತೊಡಕು ಉಂಟಾದಂತಾಗಿದೆ. ಬೆಟ್ಟದಪುರ, ಹಸುವಿನಕಾವಲು, ಚಿಕ್ಕನೇರಳೆ, ಕೋಳಿಮನೆ, ಬೆಣಗಾಲು, ಆವರ್ತಿ ಹಾಗೂ ಕೊಪ್ಪ ಮಾರ್ಗವಾಗಿ ಬೆಂಗಳೂರು ಮಂಗಳೂರು ಹೆದ್ದಾರಿಯಾಗಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಕೂಡಲೇ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ದುರಸ್ಥಿ ಕೈಗೊಳ್ಳಬೇಕು ಎಂಬೂದು ಈ ಭಾಗದ ಸ್ಥಳೀಯರು ಹಾಗೂ ವಾಹನ ಸವಾರರ ಪ್ರಮುಖ ಒತ್ತಾಯವಾಗಿದೆ.