ಬೆಂಗಳೂರು: ಸ್ನೇಹಿತೆ ಜತೆಗೆ ಜಾಲಿ ರೈಡ್ ಹೋಗುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ರಾಮೂರ್ತಿನಗರ ನಿವಾಸಿ ಯೋಗೇಶ್(೨೨) ಮೃತ ಸವಾರ. ಈತನ ಸ್ನೇಹಿತೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾನುಕುಂಟೆ-ಯಂಟಗಾನಹಳ್ಳಿ ಕೆರೆ ರಸ್ತೆಯ ಜಂಕ್ಷನ್‌ನಲ್ಲಿ ಭಾನುವಾರ ಮುಂಜಾನೆ ಸುಮಾರು ೫.೩೦ಕ್ಕೆ ಈ ಘಟನೆ ನಡೆದಿದೆ.
ಮೃತ ಯೋಗೇಶ್ ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ. ಮುಂಜಾನೆ ನಾಲ್ವರು ಸ್ನೇಹಿತರ ಪೈಕಿ ಇಬ್ಬರು ಕಾರು ಮತ್ತು ಮತ್ತಿಬ್ಬರು ದ್ವಿಚಕ್ರ ವಾಹನದಲ್ಲಿ ಸ್ಟೋನ್ ಹಿಲ್ ಬಳಿಗೆ ಜಾಲಿ ರೈಡ್ ಹೋಗುತ್ತಿದ್ದರು. ರಾಜಾನುಕುಂಟೆ-ಯಂಟಗಾನಹಳ್ಳಿ ರಸ್ತೆಯ ಜಂಕ್ಷನ್‌ನಲ್ಲಿ ಯೋಗೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ಈ ವೇಳೆ ಸವಾರ ಯೋಗೇಶ್ ಮತ್ತು ಹಿಂಬದಿ ಕುಳಿತ್ತಿದ್ದ ಸ್ನೇಹಿತೆ ರಸ್ತೆಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಲ್ಮೆಟ್ ಧರಿಸಿರಲಿಲ್ಲ:
ಹೆಲ್ಮೆಟ್ ಧರಿಸದ ಪರಿಣಾಮ ಸವಾರ ಯೋಗೇಶ್ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾದರೂ ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಯೋಗೇಶ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಾಯಾಳು ಸ್ನೇಹಿತೆಗೆ ಚಿಕಿತ್ಸೆ ಮುಂದುವರಿದಿದೆ. ವಿಷಯ ತಿಳಿದು ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಸ್ವಯಂ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.