ನ್ಯೂಸ್

ಬಿಎಂಟಿಸಿ ಬಸ್ ಹಿಂದಿಕ್ಕುವ ಬರದಲ್ಲಿ ಕೆಳಗೆ ಬಿದ್ದು ಸವಾರ ಸಾವು

ಬೆಂಗಳೂರು: ಬಿಎಂಟಿಸಿ ಬಸ್ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಿಪಟೂರು ಮೂಲದ ತೇಜಸ್ (22) ಮೃತ. ಸೋಮವಾರ ಮಧ್ಯಾಹ್ನ 12.25ರಲ್ಲಿ ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಕಡೆಗೆ ಸಾಗುವಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಗೇರಿ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಂಡು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ತೇಜಸ್, ಮಧ್ಯಾಹ್ನ ಸ್ನೇಹಿತನನ್ನು ಭೇಟಿಯಾಗುವ ಉದ್ದೇಶದಿಂದ ದ್ವಿಚಕ್ರ ವಾಹನದಲ್ಲಿ ಉತ್ತರಹಳ್ಳಿ ಕಡೆಗೆ ಹೋಗುತ್ತಿದ್ದ. ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ತೇಜಸ್, ಬಸ್ಸನ್ನು ಹಿಂದಿಕ್ಕಲು ಮುಂದಾದಾಗ ಬೈಕ್‌ಗೆ ಬಸ್ ತಾಕಿತು.

ನಿಯಂತ್ರಣ ತಪ್ಪಿ ಬಿದ್ದ ತೇಜಸ್‌ನ ತಲೆ ಮೇಲೆ ಬಸ್ ಬಲಭಾಗದ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದು, ಬಸ್ ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.