ಸಾಂದರ್ಭಿಕ ಚಿತ್ರ  
ನ್ಯೂಸ್

ತಟ್ಟೆಯಲ್ಲಿ ಅನ್ನ ಬಿಡುವಷ್ಟು ಶ್ರೀಮಂತ, ಅನ್ನ ಇಲ್ಲದಷ್ಟು ಬಡವ ಆಗಬಾರದು

ಇನ್ನೊಬ್ಬ ಕ್ರಿಕೆಟ್ ಬ್ಯಾಟನ್ನು ಕೊಂಡುಕೊಳ್ಳುವೆನೆಂದ. ಒಬ್ಬ ತನ್ನ ಪಿಗ್ಮಿಬ್ಯಾಂಕ್ ಖಾತೆಗೆ ಈ ಹಣ ಜಮಾ ಮಾಡುವೆನೆಂದು ಉತ್ತರಿಸಿದರೆ ಮತ್ತೊಬ್ಬ ಒಳ್ಳೆಯ ಚಪ್ಪಲಿಗಳನ್ನು ಖರೀದಿಸುವ ಆಶಯ ವ್ಯಕ್ತಪಡಿಸಿದ. ಆದರೆ, ಒಬ್ಬ ಹುಡುಗ ಮಾತ್ರ ಭಿನ್ನವಾದ ಉತ್ತರ ಕೊಟ್ಟ. ‘ಸರ್ ಈ ಹಣದಿಂದ ನನ್ನ ತಾಯಿಗೆ ಕನ್ನಡಕವನ್ನು ಕೊಡಿಸುವೆ’ಎಂಬುದ ಆತನ ಉತ್ತರವಾಗಿತ್ತು. ಆಶ್ಚರ್ಯ ಚಕಿತರಾದ ಪ್ರಾಂಶುಪಾಲರು ಆ ನಿರ್ಧಾರಕ್ಕೆ ಕಾರಣವನ್ನು ಕೇಳಿದರು. ಆತನೆಂದ: ‘ಸರ್, ನಾನು ನನ್ನ ಅಪ್ಪನನ್ನು ಬಾಲ್ಯದಲ್ಲೇ ಕಳಕೊಂಡ ನತದೃಷ್ಟ. ಓದಲು ಬರೆಯಲು ಬಾರದ ನನ್ನ ಅಮ್ಮ, ಮನೆಮನೆಗಳಲ್ಲಿ ಕೆಲಸ ಮಾಡಿ, ನಾನು ಮತ್ತು ನನ್ನ ತಂಗಿ ತಮ್ಮಂದಿರನ್ನೊಳಗೊಂಡ, ನಮ್ಮ ಸಂಸಾರವನ್ನು ನಡೆಸುತ್ತಿದ್ದಾಳೆ. ಆದರೆ ಈ ಹಣ ನಮ್ಮ ಮೂವರ ವಿದ್ಯಾಭ್ಯಾಸಕ್ಕೆ ಸಾಕಾಗದ ಕಾರಣ, ಬಿಡುವಿನ ವೇಳೆಯಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದಾಳೆ.

ಆದರೆ ಈ ನಡುವೆ ಅವಳಿಗೆ ದೃಷ್ಟಿ ದೋಷ ಬಂದಿರುವ ಕಾರಣ, ತಪ್ಪುತಪ್ಪಾಗಿ ಹೊಲಿದು ತನ್ನ ಆದಾಯವನ್ನು ಕಡಿಮೆ ಮಾಡಿಕೊಂಡಿದ್ದಾಳೆ. ಅವಳಿಗೆ ನಾನು ಈ ಕನ್ನಡಕವನ್ನು ತೆಗೆಸಿಕೊಟ್ಟರೆ ಅವಳು ಚೆನ್ನಾಗಿ ಹೊಲಿಯುವಂತಾಗಿ, ಹಣ ಸಂಪಾದನೆಯೂ ಹೆಚ್ಚಾಗಿ, ಅದು ನಮ್ಮ ಕುಟುಂಬದ ನಿರ್ವಹಣೆಗೆ ಮತ್ತು ವಿದ್ಯಾಭ್ಯಾಸಕ್ಕೆ ನೆರವಾದೀತಲ್ಲವೇ?’ ಎಂದು ಹೇಳಿದ. ಮಾತ್ರವಲ್ಲ, ಮಾತನ್ನು ಮುಂದುವರಿಸಿ ಆ ಹುಡುಗ ಹೇಳಿದ, ‘ಸರ್ ನಾನು ನನ್ನ ಹುಟ್ಟುಹಬ್ಬದ ದಿನದಂದು ಹೊಸಬಟ್ಟೆ ಕೊಡಿಸೆಂದು ಅಮ್ಮನನ್ನು ಕಾಡಿದವನಲ್ಲ. ಸದ್ಯ ಹಳೇ ಬಟ್ಟೆಯೇ ಸಾಕು, ಅದು ಇನ್ನೂ ಹರಿದಿಲ್ಲವಲ್ಲ ಎಂದು ಹೇಳಿ ಒಲ್ಲದ ಅಮ್ಮನನ್ನು ಸಮಾಧಾನಪಡಿಸಿದ್ದೇನೆ.

ಅಂತೆಯೇ ನನ್ನ ಹುಟ್ಟುಹಬ್ಬವನ್ನು ಆಚರಿಸೆಂದು ಅಮ್ಮನನ್ನು ನಾನು ಕೇಳಿದವನಲ್ಲ! ದೇಶದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸದ ಕೋಟ್ಯಂತರ ಬಡಮಕ್ಕಳು ಇರುವಾಗ ನಾನೇನು ಮಹಾ ಎಂದು ಹೇಳಿಕೊಳ್ಳುತ್ತ ಸುಮ್ಮನಾದವನು’ ಎಂದ. ಅವನ ಮಾತಿನಲ್ಲಿ ಬಡತನ ಕಲಿಸಿದ ಪಾಠವಿತ್ತು. ಹೌದು! ಇದುವೇ ಸಂಸ್ಕಾರ. ಇದು ಯಾವ ಪಠ್ಯ ಪುಸ್ತಕದಲ್ಲೂ ದೊರೆಯುವುದಿಲ್ಲ. ಇದನ್ನು ಯಾವ ಶಿಕ್ಷಕರೂ ಹೇಳಿ ಕೊಡುವುದಿಲ್ಲ. ಇವೆಲ್ಲವೂ ಬದುಕು ಕಲಿಸುವ ಪಾಠಗಳು. ನಾವು ಕಲಿಯಲಿ, ಕಲಿಯದಿರಲಿ, ಬದುಕಂತೂ ಹೊಸ ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಹೆತ್ತವರು ಎಷ್ಟೇ ಶ್ರೀಮಂತರಾಗಿದ್ದರೂ ಮಕ್ಕಳಿಗೆ ಅವಶ್ಯಕತೆಗಳನ್ನು ಮಾತ್ರ ಒದಗಿಸಿಕೊಡಬೇಕು; ಲಕ್ಷುರಿಗಳನ್ನಲ್ಲ. ಹಾಗೆ ಮಕ್ಕಳು ಕೇಳಿದ್ದನ್ನೆಲ್ಲಾ ತಕ್ಷಣ ನೀಡುತ್ತಾ ಹೋದರೆ, ಅದರ ಬೆಲೆಯನ್ನೂ, ನಿಮ್ಮ ಪ್ರೀತಿಯನ್ನೂ ಅರಿತುಕೊಳ್ಳದ ಇವರು ಕೆಟ್ಟು ಹೋಗುವ ಸಂಭವವಿದೆ.

ಈ ಸತ್ಯವನ್ನೇ ನಾನು ಒಂದು ಕಡೆ ಬರೆದೆ- ‘ಸಿರಿತನ ಬದುಕನ್ನು ಬದಲಿಸುತ್ತದೆ. ಬಡತನ ಬದುಕುವುದನ್ನು ಕಲಿಸುತ್ತದೆ’ ಎಂದು. ಹಾಗೆಂದು ನಾವು ಸ್ಥಿತಿವಂತರಾಗಿದ್ದಲ್ಲಿ ಮಕ್ಕಳನ್ನು ಬಡತನದಲ್ಲೇ ಬೆಳೆಸಬೇಕೆಂದಿಲ್ಲ. ಆದರೆ ಅವರಿಗೆ ಬಡತನದ ಪರಿಚಯವೂ ಇರಬೇಕು; ಹಣದ ಬೆಲೆಯೂ ಗೊತ್ತಿರಬೇಕು. ಕಾರಣ, ಅವರ ಜೀವನದಲ್ಲಿ ಸಿರಿತನವೇ ಶಾಶ್ವತವಾಗಿ ಇರುತ್ತದೆಯೆಂದೂ ಹೇಳಲಾಗದು. ಅಂತಹ ಸಂದರ್ಭದಲ್ಲಿ ಬಡತನದಲ್ಲೂ ಬದುಕುವ ಪರಿ ಅವರಿಗೆ ತಿಳಿದಿರಲಿ. ಅವರು ಉಂಡವರ ತೇಗನ್ನು ಕೇಳಿಸಿಕೊಂಡಂತೆ, ಹಸಿದವರ ಕೂಗನ್ನೂ ಕೇಳಿಸಿಕೊಳ್ಳಬೇಕು. ಜೇಬಲ್ಲಿ ದುಡ್ಡು ಇದ್ದಾಗ, ಹೋಟೆಲಲ್ಲಿ ಊಟ ಮಾಡಿದ ಮೇಲೆ ದುಡ್ಡ್ಡು ಎಷ್ಟಾಯಿತು ಎಂದು ಕೇಳುತ್ತೇವೆ.

ದುಡ್ಡು ಇಲ್ಲದಾಗ, ಊಟಕ್ಕೆ ಮೊದಲೇ ಒಂದು ಊಟಕ್ಕೆ ಎಷ್ಟು ದುಡ್ಡು? ಎಂದು ವಿಚಾರಿಸಿಕೊಳ್ಳುತ್ತೇವೆ. ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಬೇಕಾದುದು ಹೆತ್ತವರ ಜವಾಬ್ದಾರಿ. ಅವರನ್ನು ಸಿನಿಮಾ, ಪಾರ್ಕ, ಮಾಲ್, ಪ್ರವಾಸಗಳಿಗೆ, ಹೊಟೇಲುಗಳಿಗೆ ಕರಕೊಂಡು ಹೋಗುವಂತೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೂ ಕರಕೊಂಡು ಹೋಗಬೇಕು. ಅನಾಥಾಲಯದಲ್ಲಿ ಬಡಮಕ್ಕಳು ತಟ್ಟೆಯಲ್ಲಿ ಹಾಕಿದ ಒಂದು ಅಗುಳನ್ನೂ ಬಿಡದೆ ತಿನ್ನುವುದನ್ನು ನೋಡಿ, ನಾನೆಂದೂ ಆಹಾರ ಪೋಲುಮಾಡುವುದಿಲ್ಲ ಎಂದು ಪುಟ್ಟ ಬಾಲಕ ನಿರ್ಧರಿಸಿದರೆ, ಅದು ಸಂಸ್ಕಾರ. ಅವನಲ್ಲಿ ತಂದ ಪರಿವರ್ತನೆ.

ಅಂತೆಯೇ, ವೃದ್ಧಾಶ್ರಮದಲ್ಲಿ, ತಮ್ಮ ಮಕ್ಕಳ ಪ್ರೀತಿ ಸೇವೆಗಳಿಂದ ವಂಚಿತರಾದ ಮುದುಕರು, ಮರುಗುವುದನ್ನು ಕಂಡು, ನಾನೆಂದೂ ನನ್ನ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲವೆಂದು ಹುಡುಗ ನಿರ್ಧರಿಸಿದರೆ, ಅದು ನೀಡಿದ ಸಂಸ್ಕಾರದಿಂದಾಗಿ ಅವನಲ್ಲಿ ತಂದ ಪರಿವರ್ತನೆ. ಆದುದರಿಂದ ಶಿಕ್ಷಣದ ಜೊತೆ ಮೌಲ್ಯಗಳನ್ನು ತಿಳಿ ಹೇಳೋಣ. ಸಂಸ್ಕಾರವನ್ನು ತುಂಬೋಣ. ಕಾರಣ ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ ಹಾಗೂ ಅಪಾಯಕಾರಿ. ಒಟ್ಟಿನಲ್ಲಿ ಮಕ್ಕಳು ಊಟದ ತಟ್ಟೆಯಲ್ಲಿ ಅನ್ನ ಬಿಡುವಷ್ಟು ಶ್ರೀಮಂತರಾಗಬಾರದು. ಅಂತೆಯೇ ಅನ್ನ ಇಲ್ಲದಷ್ಟು ಬಡವರಾಗಬಾರದು!