ಶಿವಮೊಗ್ಗದಲ್ಲಿ ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕೆ.ಆರ್.ಶ್ರೀಧರ್, ವಿಜಯಾ ದಂಪತಿಯನ್ನು ಸನ್ಮಾನಿಸಲಾಯಿತು. 
ನ್ಯೂಸ್

ಬರಹದಿಂದ ವೈದ್ಯ ಸಾಹಿತ್ಯ ಶ್ರೀಮಂತ: ಡಾ. ಕೆ.ಆರ್.ಶ್ರೀಧರ್

ಶಿವಮೊಗ್ಗ: ವೈದ್ಯರ ಯಶಸ್ಸು ಅವರು ನೀಡುವ ಚಿಕಿತ್ಸಾ ವಿಧಾನದಲ್ಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ತಲ್ಲಣ, ಸವಾಲು, ಸಮಸ್ಯೆ ಸೇರಿ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಬರೆವಣಿಗೆ ಮೂಲಕ ಅರಿವು ಮೂಡಿಸಬೇಕು. ಇದರಿಂದ ವೈದ್ಯ ಬರಹ ಅಥವಾ ಸಾಹಿತ್ಯ ಶ್ರೀಮಂತವಾಗಲಿದೆ ಎಂದು ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಹೇಳಿದರು.

ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡಾ. ಕೆ.ಎ.ಅಶೋಕ್ ಪೈ ವೇದಿಕೆಯಲ್ಲಿ ಶನಿವಾರ ಐಎಂಎ(ಭಾರತೀಯ ವೈದ್ಯಕೀಯ ಸಂಘ) ಕರ್ನಾಟಕ ಮತ್ತು ಶಿವಮೊಗ್ಗ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಆಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯ ನಾಲ್ಕು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ಒಂದು ಬರಹ ಸಾವಿರಾರು ಜನರನ್ನು ತಲುಪಲಿದೆ ಎಂದರು.
ಕನ್ನಡ ವೈದ್ಯ ಸಾಹಿತ್ಯವು ಆಂಗ್ಲ ಭಾಷೆಯ ಅನುವಾದ ಆಗದೇ ಬೇರೆ ಬೇರೆ ಕ್ಷೇತ್ರದ ಜ್ಞಾನ ಭಂಡಾರ ಆಗಬೇಕು. ಬರಹಗಳು ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಸಮಾಜದ ಆರೋಗ್ಯ ಕಾಪಾಡುವ ವೈದ್ಯ ಸಾಹಿತ್ಯಕ್ಕೆ ಅನೇಕ ಸವಾಲುಗಳಿವೆ. ಭಾಷಾಂತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಆಳವಾದ ಅಧ್ಯಯನಗಳು ನಡೆಯಬೇಕಿದೆ ಎಂದು ಹೇಳಿದರು.
ಮನುಷ್ಯನಿಗೆ ಜೀವನದಲ್ಲಿ ಆರೋಗ್ಯವೇ ಮುಖ್ಯ. ಆರೋಗ್ಯವೇ ನಿಜವಾದ ಸಂಪತ್ತು. ಬಹಳಷ್ಟು ಜನರು ದೈಹಿಕ ಆರೋಗ್ಯ ಸದೃಢವಾಗಿಸಿಕೊಳ್ಳಲು ಬಗ್ಗೆ ಮಾತ್ರ ಒತ್ತುಕೊಡುತ್ತಾರೆ. ಆದರೆ ನಿಜವಾಗಿಯೂ ಸಮಗ್ರ ಆರೋಗ್ಯ ಕಲ್ಪನೆ ಅವರಲ್ಲಿ ಮೂಡಬೇಕಿದೆ. ಆ ಕೆಲಸ ವೈದ್ಯ ಸಾಹಿತ್ಯದಿಂದ ಆಗುತ್ತಿದೆ. ಅದು ಮತ್ತಷ್ಟು ವೇಗ ಮತ್ತು ಪರಿಣಾಮಕಾರಿಯಾಗಿ ಆಗಬೇಕಿದೆ ಎಂದರು.