ದಯಾನಂದ ನಾಯಕ್​, ರಾಮ್ ಗೋಪಾಲ್ ವರ್ಮಾ 
ನ್ಯೂಸ್

ಬರಲಿದೆ ಎನ್‌ಕೌಂಟರ್ ದಯಾನಾಯಕ್ ಬಯೋಪಿಕ್ : ಕರ್ನಾಟಕ ಮೂಲದ ದಕ್ಷ ಅಧಿಕಾರಿಯ ಜೀವನಾಧಾರಿತ ಚಿತ್ರಕ್ಕೆ ಆರ್‌ಜಿವಿ ಆ್ಯಕ್ಷನ್-ಕಟ್

ಪ್ರಮುಖ ಮುಖ್ಯಾಂಶಗಳು

  • ತೆರೆ ಮೇಲೆ ಬರಲಿದೆ ಎನ್ ಕೌಂಟರ್ ಸ್ಪೆಷಲಿಸ್ಟ್​ ಜೀವನ
  • ಕಂಪನಿ ಚಿತ್ರಕ್ಕೆ ಲಿಂಕ್​ ಕಥೆ ಹೇಳಲಿದ್ದಾರೆ ಆರ್ ಜಿವಿ
  • ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭ
ತೆಲುಗಿನ ‘ವ್ಯೆಹಂ’ ಬಳಿಕ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸದ್ಯ ಹಿಂದಿಯಲ್ಲಿ ‘ಪೊಲೀಸ್ ಸ್ಟೇಷನ್ ಮೇ ಭೂತ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆಯೇ ಆರ್‌ಜಿವಿ ‘ಸಿಂಡಿಕೇಟ್’, ‘ಸರ್ಕಾರ್ 4’ ಚಿತ್ರಗಳನ್ನು ಘೋಷಿಸಿದ್ದಾರೆ. ಆ ಸಿನಿಮಾಗಳಿಗೆ ಸಂಬಂಧಿಸಿದಂತೆ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮೂರು ಸಿನಿಮಾಗಳು ಕೈಯಲ್ಲಿರುವಾಗಲೇ ಆರ್‌ಜಿವಿ, ಉಡುಪಿ ಮೂಲದ ದಕ್ಷ ಪೊಲೀಸ್ ಅಧಿಕಾರಿ ಬಯೋಪಿಕ್ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ಮುಂಬೈ ಭೂಗತ ಲೋಕಕ್ಕೆ ಸಿಂಹಸ್ವಪ್ನವಾಗಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಮಾಜಿ ಪೊಲೀಸ್ ಅಧಿಕಾರಿ ದಯಾನಾಯಕ್ ಜೀವನವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ಹಾಗಂತ ದಯಾನಾಯಕ್ ಕುರಿತ ಸಿನಿಮಾ ಇದೇ ಮೊದಲೇನಲ್ಲ. ಈ ಹಿಂದೆ ‘ಎನ್‌ಕೌಂಟರ್ ದಯಾನಾಯಕ್’ (2005) ಸಿನಿಮಾ ಕನ್ನಡದಲ್ಲಿಯೇ ಬಂದಿದೆ. ಜತೆಗೆ ಬಾಲಿವುಡ್‌ನಲ್ಲೂ ‘ಅಬ್ ತಕ್ ಛಪ್ಪನ್’, ‘ಕಗಾರ್’ ಚಿತ್ರಗಳು ದಯಾನಾಯಕ್ ನಡೆಸಿದ ಎನ್‌ಕೌಂಟರ್‌ಗಳ ಸುತ್ತ ಸಾಗುತ್ತವೆ. ಹಾಗೇ ಹಿಂದಿಯಲ್ಲಿ ‘ರಿಸ್ಕ್’, ‘ಡಿಪಾರ್ಟ್‌ಮೆಂಟ್’, ತೆಲುಗಿನಲ್ಲಿ ‘ಗೋಲಿಮಾರ್’, ‘ಸಿದ್ಧಂ’ ಚಿತ್ರಗಳು ಸಹ ದಯಾನಾಯಕ್‌ರಿಂದ ಸ್ಪೂರ್ತಿ ಪಡೆದಿದ್ದವು ಎನ್ನಲಾಗಿದೆ. ಸದ್ಯ ರಾಮ್‌ಗೋಪಾಲ್, ದಯಾನಾಯಕ್ ಸ್ಟೋರಿಯನ್ನು ‘ಕಂಪನಿ ಯೂನಿವರ್ಸ್’ಗೆ ಲಿಂಕ್ ಮಾಡಿ ಕಥೆ ಹೇಳುವ ತವಕದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಈ ಪ್ರಾಜೆಕ್ಟ್ ಸದ್ಯಕ್ಕಿನ್ನೂ ಪ್ರಾರಂಭಿಕ ಹಂತದಲ್ಲಿದ್ದೂ, ಅಧಿಕೃತ ಘೋಷಣೆಗೆ ಸಾಕಷ್ಟು ಸಮಯ ಬೇಕಿದೆಯಂತೆ. ಈ ಬಯೋಪಿಕ್ ತೆರೆ ಮೇಲೆ ಬಂದರೆ ದಯಾನಾಯಕ್ ಅವತಾರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ. -ಏಜೆನ್ಸೀಸ್

ಯಾರು ಈ ಎನ್‌ಕೌಂಟರ್ ಸ್ಪೆಷಲಿಸ್ಟ್?

ಉಡುಪಿಯ ಕಾರ್ಕಳ ತಾಲೂಕಿನ ಯೆಣ್ಣೆಹೊಳೆ ಮೂಲದ ದಯಾನಾಯಕ್ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದ್ದರು. ಬಳಿಕ ಜೀವನಕ್ಕಾಗಿ ಕುಟುಂಬ ಮುಂಬೈಗೆ ವಲಸೆ ಹೋಯಿತು. ಅಲ್ಲಿ ಮುಂದಿನ ವ್ಯಾಸಂಗ ಪೂರ್ಣಗೊಳಿಸಿ, 1995ರಲ್ಲಿ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದರು. ಕ್ರಮೇಣ ಎಸಿಪಿಯಾಗಿ ಜುಹು ಪೊಲೀಸ್ ಠಾಣೆಗೆ ಬಂದ ದಯಾನಾಯಕ್ ಬಳಿಕ ಮುಂಬೈನ ಭೂಗತ ಲೋಕಕ್ಕೆ ಸಿಂಹಸ್ವಪ್ನವಾಗಿ, ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಪ್ರಸಿದ್ಧಿಯಾದರು. ತಮ್ಮ ವೃತ್ತಿ ಜೀವನದ 83 ಎನ್‌ಕೌಂಟರ್ ಮಾಡಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. 2025ರ ಜುಲೈ 31ಕ್ಕೆ ದಯಾನಾಯಕ್ ಸೇವೆಯಿಂದ ನಿವೃತ್ತಿಯಾದರು.