ನ್ಯೂಸ್

ಇದು ಒಪ್ಪುವಂತದ್ದಲ್ಲ! ನಮಗೆ ನ್ಯಾಯ ಕೊಡಿಸುವಲ್ಲಿ CBI ಸೋತಿದೆ; ಮೃತ ಟ್ರೈನಿ ವೈದ್ಯೆ ಹೆತ್ತವರು ಕಣ್ಣೀರು | RG Kar Case

RG Kar Case: ಕಳೆದ ವರ್ಷ ಆಗಸ್ಟ್​ 09ರಂದು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿದ ಕೋಲ್ಕತದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ.

ಈ ಪ್ರಕರಣದ ಆರೋಪಿ ಸಂಜಯ್ ರಾಯ್​ನನ್ನು ಕೋರ್ಟ್​ 2025ರ ಜ.18ರಂದು ಅಪರಾಧಿ ಎಂದು ತೀರ್ಪು ನೀಡಿತು. ಯುವ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ದೇಶದ ಜನತೆ ಹೆತ್ತವರ ಕಣ್ಣೀರಿಗೆ ಬೆಲೆ ಸಿಕ್ಕಿದೆ ಎಂಬ ಘೋಷಣೆಗಳನ್ನು ಕೂಗಿದರು. ಅಪರಾಧಿ ಸಂಜಯ್​ಗೆ ಕೋರ್ಟ್​ ಜೀವಾವಧಿ ಶಿಕ್ಷೆ ಮತ್ತು 50,000 ರೂ. ದಂಡವನ್ನು ವಿಧಿಸಿತು.

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಸೀಲ್ಡಾ ನ್ಯಾಯಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿತು. ಈ ಪ್ರಕರಣದಲ್ಲಿ ಸಂಜಯ್​ ಒಬ್ಬನೇ ಅಲ್ಲ! ಇನ್ನೂ ಹಲವರ ಕೈವಾಡವಿದೆ ಎಂದು ಟ್ರೈನಿ ವೈದ್ಯೆಯ ಪೋಷಕರು ಗಂಭೀರ ಆರೋಪ ಹೊರಿಸಿದ್ದರು. ಈ ಘಟನೆ ನಡೆದು ಇಂದಿಗೆ ಒಂದು ವರ್ಷ ಕಳೆದಿದ್ದು, ಮೃತ ಯುವತಿಯ ತಂದೆ ಮಾತನಾಡಿ, "ನಮಗೆ ನ್ಯಾಯ ಕೊಡಿಸುವಲ್ಲಿ ಸಿಬಿಐ ಸೋತಿದೆ. ಈ ತನಿಖಾ ತಂಡವನ್ನು ಮೊದಲು ವಿಸರ್ಜಿಸಿ" ಎಂದು ಆಗ್ರಹಿಸಿದ್ದಾರೆ.

ಸಿಬಿಐ ನಿರ್ದೇಶಕರ ಬಳಿ ಅಳಲು

"ನಮಗೆ ಈ ತನಿಖೆ ತೀರ ಅತೃಪ್ತಿ ತಂದಿದೆ. ತನಿಖೆಯ ಬಗ್ಗೆ ನಾವು ಅಧಿಕಾರಿಗಳನ್ನು ಪ್ರಶ್ನಿಸಿದೆವು. ಅಷ್ಟಕ್ಕೆ ಸಿಟ್ಟಾದ ಅವರು, ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹೇಳಿದರು. ಈ ಮಾತುಗಳು ನನ್ನನ್ನು ತೀರ ಕೆರಳಿಸಿತು. ನನಗೆ ಹೇಳುತ್ತಿರುವ ಈ ಮಾತನ್ನು ನೇರವಾಗಿ ನ್ಯಾಯಾಲಯಕ್ಕೆ ಹೇಳಿ ಎಂದು ಅಧಿಕಾರಿಗಳಿಗೆ ತಿಳಿಸಿದೆ. ನಮ್ಮ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ" ಎಂದು ಮೃತ ಟ್ರೈನಿ ತಂದೆ ಹೇಳಿದ್ದಾರೆ.

"140 ಕೋಟಿ ಜನರನ್ನು ಪ್ರತಿನಿಧಿಸುವ ಒಂದು ಸಂಸ್ಥೆ, ತನಿಖೆಯನ್ನು ಕೈಗೆತ್ತಿಕೊಂಡ ಒಂದು ವರ್ಷದ ಬಳಿಕ ಕೇಸ್​ ಕೈಬಿಡುವುದಾಗಿ ಹೇಳುವುದು ಎಷ್ಟು ಸರಿ? ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿಬಿಐ ಅನ್ನು ಇಟ್ಟುಕೊಳ್ಳುವುದು ನಿಜಕ್ಕೂ ಅಗತ್ಯವಿದೆಯೇ? ಇಂತಹ ಸರ್ಕಾರಿ ಸಂಸ್ಥೆಗಳನ್ನು ಮುಚ್ಚುವುದೇ ಒಳಿತು" ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).