ನ್ಯೂಸ್

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಸುಳಿವು ನೀಡುವಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಜತೆಗೆ ಸುಳಿವು ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಿದ್ದು, ಸೂಕ್ತ ಬಹುಮಾನ ನೀಡುವುದಾಗಿಯೂ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಹಿಂದೂ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಕಳೆದ ವರ್ಷ ಜುಲೈ ೨೬ರಂದು ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸುಮಾರು ೧೩ಕ್ಕೂ ಅಧಿಕ ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ೧೫ನೇ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಮೊಹಮ್ಮದ್ ಮುಸ್ತಫಾ, ೧೬ನೇ ಆರೋಪಿ ನೆಕ್ಕಿಲ್ಯಾಡಿ ಮೂಲದ ಮಸೂದ್ ಅಗ್ನಾಡಿ, ೧೭ನೇ ಆರೋಪಿ ಬಂಟ್ವಾಳ ಮೂಲದ ಮೊಹಮ್ಮದ್ ಶರೀಫ್, ೧೮ನೇ ಆರೋಪಿ ಆರ್. ಉಮರ್ ಅಲಿಯಾಸ್ ಉಮರ್ ಫಾರೂಕ್ ಹಾಗೂ ೧೯ನೇ ಆರೋಪಿ ಬೆಳ್ಳಾರೆ ಮೂಲದ ಅಬೂಬಕ್ಕರ್ ಸಿದ್ದಿಕಿ ಕುರಿತು ಮಾಹಿತಿ ತಿಳಿದ ಕೂಡಲೇ ಸಾರ್ವಜನಿಕರು ಎನ್‌ಐಎಗೆ ಸಂಬಂಧಿಸಿದ ೯೪೯೭೭೧೫೨೯೪ ನಂಬರ್‌ಗೆ ಸಂಪರ್ಕಿಸಬಹುದು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರುನನ್ನು ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು.