ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ. 
ನ್ಯೂಸ್

ವಿಐಎಸ್‌ಎಲ್ ಕಾರ್ಖಾನೆಗೆ ಮರುಜೀವ

ಶಿವಮೊಗ್ಗ: ಬಹು ನಿರೀಕ್ಷಿತ ಭದ್ರಾವತಿಯ ವಿಐಎಸ್‌ಎಲ್(ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ) ಪುನರಾರಂಭಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಸಂಪೂರ್ಣ ಮುಚ್ಚಿ ಖಾಸಗೀಕರಣದ ಹಂತಕ್ಕೂ ತಲುಪಿದ್ದ ಕಾರ್ಖಾನೆಗೆ ಇದೀಗ ಮರುಜೀವ ಬಂದಿದ್ದು ತನ್ನ ಗತವೈಭವ ಕಾಣುವುದಕ್ಕೆ ಸಜ್ಜಾಗಿದೆ. ಆ.10ರಿಂದಲೇ ಕಾರ್ಖಾನೆಯ ಬಾರ್‌ಮಿಲ್‌ನಲ್ಲಿ ಉತ್ಪಾದನೆ ಮಾಡುವುದಾಗಿ ಸೈಲ್ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ಒಪ್ಪಿಗೆ ನೀಡಿದೆ.

ಕಳೆದೊಂದು ದಶಕದಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿತ್ತು. ಸಣ್ಣಪುಟ್ಟ ಉತ್ಪಾದನೆ ಹೊರತುಪಡಿಸಿ ದೊಡ್ಡ ಪ್ರಮಾಣದ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಇದೀಗ ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಭದ್ರಾವತಿಯ ಸುವರ್ಣಯುಗ ಕಾರ್ಖಾನೆ ಮೂಲಕ ಮತ್ತೆ ಶುರುವಾಗುವ ಹಂತಕ್ಕೆ ತಲುಪಿದೆ.
ವಿಐಎಸ್‌ಎಲ್ ಮೈಕೊಡವಿ ಮೇಲೇಳುವ ಮುನ್ಸೂಚನೆ ಸಿಕ್ಕಿದೆ. ಕಳೆದ ಜನವರಿಯಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಚಟುವಟಿಕೆಗಳಿಗೆ ಮರುಜೀವ ಸಿಕ್ಕಿದ್ದು, ಆರು ತಿಂಗಳ ಬಳಿಕ ಬಾರ್‌ಮಿಲ್‌ನ ಕಾರ್ಯಾಚರಣೆಗೆ ದಿನಗಣನೆ ಆರಂಭವಾಗಿದೆ. ಇದಾದ ಒಂದೆರಡು ತಿಂಗಳಲ್ಲೇ ಪ್ರಾಥಮಿಕ ಗಿರಣಿ ಕೂಡ ಆರಂಭವಾಗುವ ನಿರೀಕ್ಷೆಯಿದೆ.