ಬೆಂಗಳೂರು: ಗೃಹ ವೈದ್ಯ, ಸ್ನಾತಕೋತ್ತರ ವೈದ್ಯ, ಸೂಪರ್ ಸ್ಪೆಷಾಲಿಟಿ ಮತ್ತು ಫೆಲೋಶಿಪ್ ವಿದ್ಯಾರ್ಥಿಗಳು ಹಾಗೂ ಸೀನಿಯರ್ ರೆಸಿಡೆಂಟ್ಸ್ (ಸರ್ಕಾರಿ ಸೇವೆ).. ಇವರ ಶಿಷ್ಯವೇತನ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್-19 ಮುಂಚೂಣಿ ಸೇನಾನಿಗಳು ಎಂದು ಪರಿಗಣಿಸಿ, ಒಟ್ಟು 6 ಸಾವಿರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಶೇ.42ರಿಂದ 45 ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 789 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷ ಶಿಷ್ಯವೇತನಕ್ಕಾಗಿ 128 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿತ್ತು. ಈ ವರ್ಷ 78 ಕೋಟಿ ರೂ. ಹೆಚ್ಚುವರಿಯಾಗಿದ್ದು, ಒಟ್ಟು 256 ಕೋಟಿ ರೂ. ನೀಡಲಾಗುತ್ತದೆ. ಕಳೆದ ವಾರ ವೈದ್ಯಕೀಯ ಶಿಕ್ಷಣ ಇಲಾಖೆಯ 2,500 ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಸವಲತ್ತು ಕಲ್ಪಿಸಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ವಾರ್ಷಿಕ 137 ಕೋಟಿ ರೂ. ಹೆಚ್ಚು ಆರ್ಥಿಕ ಹೊರೆ ಬೀಳಲಿದೆ. ಬೋಧಕರಿಗೆ ಒಟ್ಟು ವಾರ್ಷಿಕ 1,404 ಕೋಟಿ ರೂ. ಸಂಬಳ ಇತ್ತು. ಈಗದು 1,542 ಕೋಟಿ ರೂ.ಗೆ
ಏರಿದಂತಾಗಿದೆ ಎಂದರು. ಆರ್ಥಿಕ ಸಂಕಷ್ಟವಿದ್ದರೂ ಸಂಬಳ ಹಾಗೂ ಶಿಷ್ಯವೇತನ ಏರಿಕೆ ಮೂಲಕ ಕರೊನಾ ಸೇನಾನಿಗಳಿಗೆ ಸರ್ಕಾರ ಗೌರವ ಸಲ್ಲಿಸಿದೆ ಎಂದು ತಿಳಿಸಿದರು.
ಖಾಸಗಿಯವರು ಪಾಲಿಸಬೇಕು: ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಪರಿಷ್ಕರಿಸಿದೆ. ಇದನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ಪಾಲಿಸಬೇಕು. ಪಾಲಿಸದೇ ಇರುವ ಕೆಲ ದೂರುಗಳು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ ಕರೊನಾ ಹತೋಟಿಯಲ್ಲಿದೆ. ಆದರೆ, ಜನ ಅವರ ಆರೋಗ್ಯದ ಬಗ್ಗೆ ಅವರೇ ಹೆಚ್ಚು ಕಾಳಜಿ ವಹಿಸಬೇಕು. ಕರೊನಾ ತಡೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಿಯಮಗಳ ಜಾರಿಗೆ ಬರಲಿವೆ. ಲಾಕ್ಡೌನ್ ಸಡಿಲಿಕೆ ಕಾರಣ ಈಗ ಕೆಂಪು, ಕಿತ್ತಳೆ, ಹಸಿರು ವಲಯಗಳ ವರ್ಗೀಕರಣ ಪರಿಗಣಿಸುವುದಿಲ್ಲ. ಕಂಟೇನ್ವೆುಂಟ್ ವಲಯಗಳು ಮಾತ್ರ ಇರುತ್ತವೆ ಎಂದು ಹೇಳಿದರು.