ನವದೆಹಲಿ: ಆಧಾರ್ ಸಂಬಂಧಿತ ನಾನಾ ಸೇವೆಗಳ ಶುಲ್ಕ ಸ್ವರೂಪವನ್ನು ಪರಿಷ್ಕರಿಸಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿದ್ದು 2028ರ ಸೆಪ್ಟೆಂಬರ್ 30ರವರೆಗೆ ಅನ್ವಯವಾಗಲಿದೆ. ಅದಾದ ನಂತರ, ಮತ್ತೆ ಮೂರು ವರ್ಷಕ್ಕೆ ಪರಿಷ್ಕಾರಗೊಳ್ಳಲಿರುವ ದರಗಳನ್ನು ಕೂಡ ಪ್ರಾಧಿಕಾರ ಪ್ರಕಟಿಸಿದೆ. ಅವು 2028ರ ಅಕ್ಟೋಬರ್ 1ರಿಂದ 2031 ಸೆಪ್ಟೆಂಬರ್ 30ರವರೆಗೆ ಅನುಷ್ಠಾನದಲ್ಲಿರುತ್ತವೆ.
ಹೊಸ ದರಗಳ ಪ್ರಕಾರ, ಸ್ಟ್ಯಾಂಡರ್ಡ್ ಸೇವಾ ಶುಲ್ಕಗಳು ಏರಿಕೆಯಾಗಲಿವೆ. ಇದುವರೆಗೆ 50 ರೂಪಾಯಿ ಇದ್ದ ಶುಲ್ಕಗಳು 75 ರೂಪಾಯಿಗೆ ಏರಿಕೆಯಾಗಲಿದೆ. 100 ರೂಪಾಯಿ ಶುಲ್ಕದ ಸೇವೆಗಳು 125 ರೂ.ಗೆ ಏರಲಿವೆ. 2028ರಿಂದ 75 ರೂ. ಶುಲ್ಕವು 90 ರೂ.ಗೆ ಹಾಗೂ 125 ರೂ. ಶುಲ್ಕವು 150 ರೂ.ಗೆ ಏರಲಿದೆ.
ಬಯೋಮೆಟ್ರಿಕ್ ಅಪ್ಡೇಟ್ಸ್: 5ರಿಂದ 7 ವರ್ಷ ವರೆಗಿನ ಮಕ್ಕಳು ಹಾಗೂ 15ರಿಂದ 17 ವರ್ಷವರೆಗಿನ ಹದಿವಯಸ್ಕರ ಬಯೋಮೆಟ್ರಿಕ್ ಅಪ್ಡೇಟ್ಸ್ ಉಚಿತವಾಗಿರುತ್ತವೆ. 7ರಿಂದ 15 ವರ್ಷದ ಮಕ್ಕಳಿಗೆ 2026ರ ಸೆಪ್ಟೆಂಬರ್ 30ರವರೆಗೆ ಬಯೋಮೆಟ್ರಿಕ್ ಅಪ್ಡೇಟ್ಸ್ ಉಚಿತವಾಗಿರುತ್ತವೆ. ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ಸ್ (ಎಂಬಿಯು) ಹಿಂಬಾಕಿಯನ್ನು ತಗ್ಗಿಸುವ ಪ್ರಾಧಿಕಾರದ ಉಪಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತರ ಬಯೋಮೆಟ್ರಿಕ್ ಅಪ್ಡೇಟ್ಸ್ಗೆ 125 ರೂಪಾಯಿ ವೆಚ್ಚವಾಗುತ್ತದೆ. ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ ಅಥವಾ ಸಂಪರ್ಕ ವಿಳಾಸ ಇತ್ಯಾದಿ ಜನಸಂಖ್ಯೆ ಸಂಬಂಧಿತ (ಡೆಮಾಗ್ರಫಿಕ್) ಅಪ್ಡೇಟ್ಗಳನ್ನು ಬಯೋಮೆಟ್ರಿಕ್ ಅಪ್ಡೇಟ್ಗಳೊಂದಿಗೆ ಉಚಿತವಾಗಿ ಮಾಡಲಾಗುತ್ತದೆ. ಸ್ವತಂತ್ರವಾದ (ಸ್ಟ್ಯಾಂಡ್ಅಲೋನ್) ಅಪ್ಡೇಟ್ಸ್ಗೆ ಈಗ 50 ರೂ. ಶುಲ್ಕ ವಿಧಿಸಲಾಗುತ್ತಿದ್ದು, ಪರಿಷ್ಕೃತ ದರದ ಪ್ರಕಾರ 75 ರೂ.ಗೆ ಏರಿಕೆಯಾಗಲಿದೆ.
ಹೋಮ್ ಎನ್ರೋಲ್ವೆುಂಟ್ ಶುಲ್ಕ: ಹೋಮ್ ಎನ್ರೋಲ್ವೆುಂಟ್ ಸೇವೆಗಳಿಗೆ ಯುಐಡಿಎಐ ಜಿಎಸ್ಟಿ ಸಹಿತ 700 ರೂ. ಶುಲ್ಕ ವಿಧಿಸುತ್ತದೆ. ಹಾಗೂ ಅದಕ್ಕೆ ಹೆಚ್ಚುವರಿಯಾಗಿ ಸ್ಟ್ಯಾಂಡರ್ಡ್ ಅಪ್ಡೇಟ್ ಶುಲ್ಕ ವಸೂಲಿ ಮಾಡಲಾಗುತ್ತದೆ. ಒಂದೇ ವಿಳಾಸದಲ್ಲಿ ಹಲವು ನಿವಾಸಿಗಳು ಈ ಸೇವೆಯನ್ನು ಬಯಸಿದರೆ ಮೊದಲು ನೋಂದಾಯಿಸಿಕೊಂಡವರು 700 ರೂ. ಶುಲ್ಕ ತೆರಬೇಕಾಗುತ್ತದೆ. ನಂತರದ ಪ್ರತಿ ನೋಂದಣಿದಾರರು ತಲಾ 350 ರೂ. ಶುಲ್ಕ ಕೊಡಬೇಕು.