ನ್ಯೂಸ್

ನೀಟ್​-ಯುಜಿ ಪರಿಷ್ಕೃತ ಫಲಿತಾಂಶ ಪ್ರಕಟ: ಆನ್​ಲೈನ್​ನಲ್ಲಿ ಈ ರೀತಿ ನಿಮ್ಮ ರಿಸಲ್ಟ್​ ಪರಿಶೀಲಿಸಬಹುದು..

ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನವನ್ನು ಅನುಸರಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ)ಯು ನೀಟ್-ಯುಜಿ 2024 ಪರಿಷ್ಕೃತ ಫಲಿತಾಂಶವನ್ನು ಇಂದು (ಜುಲೈ 26) ಸಂಜೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಪರಿಷ್ಕೃತ ನೀಟ್​ ಫಲಿತಾಂಶವನ್ನು exams.nta.ac.in. ಅಧಿಕೃತ ವೆಬ್​ಸೈಟ್​ ಮೂಲಕ ಪರಿಶೀಲಿಸಬಹುದಾಗಿದೆ.

ಪರಿಷ್ಕೃತ ಅಂತಿಮ ಫಲಿತಾಂಶವು ಭೌತಶಾಸ್ತ್ರದ ಪ್ರಶ್ನೆಗೆ ಕೆಲವು ವಿದ್ಯಾರ್ಥಿಗಳಿಗೆ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಅನುಸರಿಸಿದೆ. ಹಳೆಯ 12ನೇ ತರಗತಿಯ NCERT ವಿಜ್ಞಾನ ಪಠ್ಯಪುಸ್ತಕದಲ್ಲಿನ ದೋಷದಿಂದಾಗಿ ಎನ್​ಟಿಎ ಈ ಹಿಂದೆ ಹೆಚ್ಚುವರಿ ಅಂಕಗಳನ್ನು ನೀಡಿತು. ಒಟ್ಟು 44 ವಿದ್ಯಾರ್ಥಿಗಳಿಗೆ ತಪ್ಪಾದ ಭೌತಶಾಸ್ತ್ರ ಪ್ರಶ್ನೆಗೆ ಗ್ರೇಸ್ ಅಂಕಗಳನ್ನು ನೀಡಲಾಗಿತ್ತು.

ಬಳಿಕ ಸುಪ್ರೀಂಕೋರ್ಟ್ ಆದೇಶದಂತೆ ಐಐಟಿ ದೆಹಲಿ, ನೀಟ್ ಯುಜಿ ಭೌತಶಾಸ್ತ್ರ ಪ್ರಶ್ನೆಯನ್ನು ಎರಡು ಸರಿಯಾದ ಆಯ್ಕೆಗಳೊಂದಿಗೆ ಪರಿಶೀಲಿಸಲು ಸಮಿತಿಯನ್ನು ರಚಿಸಿತು. ಕೇವಲ ಒಂದು ಉತ್ತರವನ್ನು ಮಾತ್ರ ಸರಿಯಾಗಿ ಪರಿಗಣಿಸಲಾಗುವುದು ಎಂದು ಸಮಿತಿಯು ನಿರ್ಧರಿಸಿತು. ಇದೀಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಪರಿಷ್ಕೃತ ಫಲಿಯತಾಂಶವನ್ನು ಪ್ರಕಟಿಸಲಾಗಿದೆ.

ನೀಟ್​ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?

* exams.nta.ac.in/NEET ನಲ್ಲಿ ಅಧಿಕೃತ NTA ವೆಬ್‌ಸೈಟ್‌ಗೆ ಭೇಟಿ ನೀಡಿ

* ಪರಿಷ್ಕೃತ ಅಂಕಪಟ್ಟಿಗಾಗಿ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ

* ನಿಮ್ಮ ಕ್ರೆಡಿನ್ಸಿಯಲ್ಸ್​ ಅನ್ನು ನಮೂದಿಸಿ

* ನಿಮ್ಮ ಪರಿಷ್ಕೃತ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ

* ನಿಮ್ಮ ಸ್ಕೋರ್​ಕಾರ್ಡ್​ ಅನ್ನು ಒಮ್ಮೆ ಚೆಕ್​ ಮಾಡಿ ಡೌನ್​ಲೌಡ್​ ಮಾಡಿಕೊಳ್ಳಿ

ಅಂದಹಾಗೆ ಎನ್​ಟಿಎ ಮೇ 5 ರಂದು 571 ನಗರಗಳಲ್ಲಿರುವ 4,750 ವಿವಿಧ ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (UG) ನಡೆಸಿತ್ತು. ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಸಮಯ ನಷ್ಟ ಅನುಭವಿಸಿದ 1,563 ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆ ನಡೆಸಲಾಯಿತು. (ಏಜೆನ್ಸೀಸ್​)