ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ. ಅಲ್ಲಿಯವರೆಗೆ ಲಾಕ್ಡೌನ್ ಹೇಗಿರಲಿದೆ ಎಂಬ ಬಗ್ಗೆ ಇಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಏಪ್ರಿಲ್ 20ರವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಮುಂದುವರಿಯಲಿದ್ದು, ಅದಾದ ಬಳಿಕ ಪರಿಸ್ಥಿತಿ ನೋಡಿಕೊಂಡು ದೇಶದ ಯಾವ ಭಾಗದಲ್ಲಿ ಕರೊನಾ ಪ್ರಮಾಣ ಕಡಿಮೆ ಇದೆಯೋ ಅಂಥ ಪ್ರದೇಶಗಳಲ್ಲಿ ಕೆಲವು ಆಯ್ದ ಅಗತ್ಯ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ನೀಡಲಾಗುವುದು ಎಂದು ನಿನ್ನೆ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.
ಮೊದಲನೇ ಹಂತದ ಲಾಕ್ಡೌನ್ ಅವಧಿ ಏ.14ಕ್ಕೆ ಮುಕ್ತಾಯವಾಗಿದ್ದು, ಇಂದಿನಿಂದ ಎರಡನೇ ಹಂತ ಶುರುವಾಗಿದೆ. ಇಂದಿನಿಂದ ಏನೇನು ಇರಲಿವೆ? ಯಾವುದಕ್ಕೆಲ್ಲ ಅವಕಾಶ ಇದೆ ಎಂಬುದನ್ನು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
- ವಿಮಾನಯಾನ, ರೈಲು, ರಸ್ತೆ ಪ್ರಯಾಣಗಳು ಬಂದ್ ಇರಲಿವೆ. ಹಾಗೇ ಶಿಕ್ಷಣ, ತರಬೇತಿ ಸಂಸ್ಥೆಗಳು ಪ್ರಾರಂಭವಾಗುವುದಿಲ್ಲ. ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಹಾಸ್ಪಿಟಾಲಿಟಿ ಸರ್ವೀಸ್ ( ಹೋಟೆಲ್ಗಳು, ಕ್ಯಾಟರಿಂಗ್, ರೆಸ್ಟೋರೆಂಟ್, ಲಾಡ್ಜಿಂಗ್ಗಳು), ಸಿನಿಮಾ ಥಿಯೇಟರ್ಗಳು, ಶಾಪಿಂಗ್ ಮಾಲ್ಗಳು ತೆರೆಯುವುದಿಲ್ಲ.
- ಹಾಗೇ ಸಾಮಾಜಿಕ, ರಾಜಕೀಯ ಮತ್ತು ಗುಂಪುಗೂಡಬಹುದಾದ ವೈಯಕ್ತಿಯ ಸಮಾರಂಭಗಳನ್ನು ನಡೆಸುವಂತಿಲ್ಲ. ಧಾರ್ಮಿಕ ಕೇಂದ್ರಗಳು, ಪುಣ್ಯಕ್ಷೇತ್ರಗಳು ಬಂದ್ ಇರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ಮಾಡುವುದಕ್ಕೆ ಅವಕಾಶ ಇಲ್ಲ. ಧಾರ್ಮಿಕ ಸಭೆ, ಸಮಾವೇಶ, ಬೋಧನಾ ಕಾರ್ಯಕ್ರಮಗಳನ್ನೂ ಆಯೋಜಿಸುವಂತಿಲ್ಲ.
- ಸಾರ್ವಜನಿಕ ಪ್ರದೇಶಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. (ಇದು ಹೋಮ್ ಮೇಡ್ ಆಗಿರಲಿ)
ಕಚೇರಿಗೆ ಬಂದೇ ಕೆಲಸ ಮಾಡುವ ಅನಿವಾರ್ಯತೆ ಇರುವವರು ಆಫೀಸ್ನಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವು ಹೀಗಿವೆ.
a) ಆಫೀಸ್ಗಳಲ್ಲಿ ಸ್ಯಾನಿಟೈಸರ್ಗಳನ್ನು ಸರಬರಾಜು ಮಾಡಬೇಕು.
b)ಉದ್ಯೋಗಿಗಳು ಪಾಳಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಎಲ್ಲರೂ ಒಟ್ಟಿಗೇ ಕಚೇರಿಗೆ ಬರುವಂತಿಲ್ಲ.
ಯಾವುದೇ ಕಂಪನಿಗಳಿಗೆ, ಕಚೇರಿಗಳಿಗೆ ಹೊರಗಿನಿಂದ ಬರುವವರ ಪ್ರವೇಶವನ್ನು ನಿಯಂತ್ರಿಸಬೇಕು. ಒಮ್ಮೆಲೆ ಒಳಗೆ ಬಿಡುವಂತಿಲ್ಲ.
c) ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಕಡ್ಡಾಯ
d) ಕಚೇರಿಯ ಕಟ್ಟಡ, ಅದರ ಸುತ್ತಮುತ್ತ ಬೇಕಾಬಿಟ್ಟಿ ಉಗುಳುವವರಿಗೆ ದಂಡ ಹಾಕಬೇಕು.
e)ಕೆಲಸದ ಸ್ಥಳದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೆ ಇರುವವರಿಗೆ ದಂಡ ವಿಧಿಸಬೇಕು.
- ದೇಶದ ಕೆಲವು ಜಿಲ್ಲೆಗಳು, ಪ್ರದೇಶಗಳಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರು ಕಂಡುಬಂದಿದ್ದರಿಂದ ಆ ಸ್ಥಳಗಳನ್ನು ಹಾಟ್ಸ್ಫಾಟ್ಗಳೆಂದು ಗುರುತಿಸಲಾಗಿದೆ. ಇಂತಹ ಕರೊನಾ ವೈರಸ್ ಹಾಟ್ಸ್ಫಾಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಕರೊನಾ ಹಾಟ್ಸ್ಫಾಟ್ ವಲಯಗಳಲ್ಲಿ ತೀರ ಅಗತ್ಯ ಸೇವೆ ಮತ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಹಾಟ್ಸ್ಫಾಟ್ ವಲಯವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದು, ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಲಾಗುವುದು.
- ಕೃಷಿ ಮತ್ತು ತೋಟಗಾರಿಕೆ ಸಂಬಂಧ ಚಟುವಟಿಕೆಗಳಿಗೆ ಅಡ್ಡಿ ಇಲ್ಲ. ಹಳ್ಳಿಗಳ ರೈತರ ಆರ್ಥಿಕ ಕಾರ್ಯಗಳನ್ನು ನಿರ್ಬಂಧಿಸಲಾಗುವುದಿಲ್ಲ. ಹಾಗೇ ದಿನಗೂಲಿ ನೌಕರರು ಸೇರಿ ಇತರ ಕಾರ್ಮಿಕ ವರ್ಗಕ್ಕೆ ಕೆಲಸ ಮಾಡಲು ಅವಕಾಶ ಸೃಷ್ಟಿಸಲಾಗುವುದು.
- ಕೆಲವು ಆಯ್ದ ಕೈಗಾರಿಕಾ ಚಟುವಟಿಕೆಗಳನ್ನು ಮುಂದುವರಿಸಲಾಗುವುದು. ಆದರೆ ಕೆಲಸಗಾರರು ಶಿಫ್ಟ್ನಲ್ಲಿ ಬರುವುದು ಕಡ್ಡಾಯ. ಹಾಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಾರ್ಗಸೂಚಿಯಲ್ಲಿ ಹೇಳಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು. ಡಿಜಿಟಲ್ ಆರ್ಥಿಕತೆಯನ್ನು ಅನುಸರಿಸಬೇಕು.
- ಕೊವಿಡ್-19 ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾರ್ಗಸೂಚಿಯೊಂದಿಗೆ ರಾಷ್ಟ್ರೀಯ ನಿರ್ದೇಶನಗಳನ್ನೂ ನೀಡಲಾಗಿದ್ದು, ಆಯಾ ಜಿಲ್ಲಾಧಿಕಾರಿಗಳು ಅದನ್ನು ಜಾರಿಗೊಳಿಸಲಿದ್ದಾರೆ. ನಿರ್ದೇಶನಗಳನ್ನು ಮೀರುವವರಿಗೆ ದಂಡ ವಿಧಿಸುವ ಅಥವಾ ಶಿಕ್ಷಿಸುವ ಅಧಿಕಾರವೂ ಜಿಲ್ಲಾಧಿಕಾರಿಗೆ ಇರುತ್ತದೆ.
- ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲಾಡಳಿತಗಳಿಂದ ಅತಿ ಹೆಚ್ಚು ಕರೊನಾ ಬಾಧಿತ ಪ್ರದೇಶಗಳು ಎಂದು ಗುರುತಿಸಲ್ಪಟ್ಟಿರುವ ವಲಯಗಳಲ್ಲಿ ಏ.20ರ ನಂತರ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ತಪಾಸಣೆಗೆ ಒಳಪಡಿಸದೆ ಇಂತಹ ವಲಯಗಳಿಗೆ ಯಾರನ್ನು ಬಿಟ್ಟುಕೊಳ್ಳುವಂತೆಯೂ ಇಲ್ಲ, ಹೊರಗೆ ಕಳಿಸುವಂತೆಯೂ ಇಲ್ಲ. ಜನರ ಓಡಾಟಕ್ಕೂ ಕಡಿವಾಣ ಬೀಳಲಿದೆ. ಏ.20ರ ನಂತರ ಈ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯಂತಹ ತುರ್ತು ಮತ್ತು ಅತ್ಯಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ.
- ಅಗತ್ಯವಸ್ತುಗಳು ಅಥವಾ ಅಗತ್ಯವಿಲ್ಲದ ವಸ್ತುಗಳು ಎಂಬ ವರ್ಗೀಕರಣವಿಲ್ಲದೆಯೇ ಎಲ್ಲ ಸರಕುಗಳ ಸಾಗಣೆಗೆ ಅನುಮತಿ ಸಿಗಲಿದೆ.
- ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಅರ್ಥಾತ್ ಕೃಷಿ ಉತ್ಪನ್ನ ಖರೀದಿ, ಅಧಿಸೂಚಿತ ಮಂಡಿಗಳ ಮೂಲಕ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ ಮತ್ತು ನೇರ ಹಾಗೂ ವಿಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆ, ರಸಗೊಬ್ಬರ, ಕೀಟನಾಶಕ ಮತ್ತು ಬೀಜಗಳ ಉತ್ಪಾದನೆ, ವಿತರಣೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಕೆಗೆ ಅವಕಾಶ, ಸಮುದ್ರ ಮತ್ತು ಒಳನಾಡು ಮೀನುಗಾರಿಕೆ ಚಟುವಟಿಕೆ, ಪಶುಸಂಗೋಪನಾ ಚಟುವಟಿಕೆ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಪೌಲ್ಟ್ರಿಗೆ ಸಂಬಂಧಿತ ಪೂರೈಕೆ ಜಾಲ, ಚಹಾ, ಕಾಫಿ ಮತ್ತು ರಬ್ಬರ್ ತೋಟಗಳ ಕೆಲಸ ಚಟುವಟಿಕೆಗಳಿಗೆ ಅಡ್ಡಿ ಇಲ್ಲ.
- ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳು ಸೇರಿ ಕೈಗಾರಿಕೆಗಳು ಚಾಲನೆಯಲ್ಲಿ ಇರಲಿವೆ. ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಕಟ್ಟಡಗಳು ಮತ್ತು ಕೈಗಾರಿಕಾ ಪ್ರಾಜೆಕ್ಟ್ಗಳು ಮುಂದುವರಿಯಲಿವೆ. ಅಲ್ಲದೆ, ಎಂಎನ್ಆರ್ಇಜಿಎ ವ್ಯಾಪ್ತಿಯ ಕೆಲಸಗಳು ಅಂದರೆ ನೀರಾವರಿ ಮತ್ತು ಜಲಸಂಪನ್ಮೂಲ ವೃದ್ಧಿಗೆ ಸಂಬಂಧಿತ ಕೆಲಸಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಮುಂದುವರಿಸುವುದಕ್ಕೆ ಅಡ್ಡಿ ಇಲ್ಲ. ಇದಲ್ಲದೆ, ಗ್ರಾಮೀಣ ಭಾಗದ ಸಾಮಾನ್ಯ ಸೇವಾ ಕೇಂದ್ರಗಳು ಚಾಲ್ತಿಯಲ್ಲಿ ಇರಲಿವೆ. ಈ ಚಟುವಟಿಕೆಗಳು ವಲಸೆ ಕಾರ್ಮಿಕರಿಗೂ ಸೇರಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜಿಸಲಿವೆ.
- ಇಂಡಸ್ಟ್ರಿಯಲ್ ಎಸ್ಟೇಟ್, ಇಂಡಸ್ಟ್ರಿಯಲ್ ಟೌನ್ಶಿಪ್, ಎಸ್ಇಝೆಡ್ ಮತ್ತು ಇಒಯುಗಳಲ್ಲಿ ಇರುವ ಉತ್ಪಾದನಾ ಮತ್ತು ಇತರೆ ಕೈಗಾರಿಕಾ ಸಂಸ್ಥೆಗಳಲ್ಲೂ ಸೋಷಿಯಲ್ ಡಿಸ್ಟೆನ್ಸಿಂಗ್ ಸಂಬಂಧಿಸಿದ ಸಾಮಾನ್ಯ ಕ್ರಿಯಾ ಮಾರ್ಗೂಸೂಚಿ ಜಾರಿಗೊಳಿಸಿದ ಬಳಿಕ ಕೆಲಸಗಳನ್ನು ಆರಂಭಿಸಲು ಅವಕಾಶವಿದೆ. ಐಟಿ ಹಾರ್ಡ್ವೇರ್ ಮತ್ತು ಅಗತ್ಯ ವಸ್ತುಗಳ ಹಾಗೂ ಪ್ಯಾಕೇಜಿಂಗ್ಗೂ ಅವಕಾಶವನ್ನು ಒದಗಿಸಲಾಗುತ್ತಿದೆ. ಕಲ್ಲಿದ್ದಲು, ಖನಿಜ ಮತ್ತು ತೈಲ ಉತ್ಪಾದನೆ ಕೆಲಸಗಳಿಗೂ ಅನುಮತಿ ಇದೆ. ಎಲ್ಲ ಇಂಡಸ್ಟ್ರಿಯಲ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸೆಕ್ಟೆರ್ಗಳು ಈ ಎಲ್ಲ ಕ್ರಮಗಳನ್ನು ಅಳವಡಿಸುವುದರೊಂದಿಗೆ ಪುನಶ್ಚೇತನ ಪಡೆಯಲಿದೆ. ಅಲ್ಲದೆ, ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿವೆ.
- ಇದೇ ವೇಳೆ ಹಣಕಾಸು ಕ್ಷೇತ್ರದಲ್ಲಿ ಆರ್ಬಿಐ, ಬ್ಯಾಂಕುಗಳು, ಎಟಿಎಂಗಳು, ಸೆಬಿಯ ಮಾರ್ಗಸೂಚಿ ಪ್ರಕಾರ ಬಂಡವಾಳ ಮತ್ತು ಸಾಲ ಮಾರುಕಟ್ಟೆಗಳು ಮತ್ತು ವಿಮಾ ಕಂಪನಿಗಳು ತಮ್ಮ ಕೆಲಸವನ್ನು ಮುಂದುವರಿಸಲಿವೆ. ಇಂಡಸ್ಟ್ರಿಯಲ್ ಕ್ಷೇತ್ರಕ್ಕೆ ಯಾವುದೇ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
- ಸರ್ವೀಸ್ ಸೆಕ್ಟರ್ಗೆ ಡಿಜಿಟಲ್ ಎಕಾನಮಿ ಅತೀ ಅವಶ್ಯವಾಗಿದ್ದು, ರಾಷ್ಟ್ರೀಯ ಬೆಳವಣಿಗೆಗೂ ಇದು ಮುಖ್ಯವಾಗಿದೆ. ಅದೇ ರೀತಿ, ಇ-ಕಾಮರ್ಸ್ ಚಟುವಟಿಕೆಗಳು, ಐಟಿ ಕಾರ್ಯಾಚರಣೆ ಮತ್ತು ಐಟಿ ಆಧಾರಿತ ಸೇವೆಗಳು, ಡೇಟಾ ಮತ್ತು ಸರ್ಕಾರದ ಚಟುವಟಿಕೆಗಳಿಗೆ ಸಂಬಂಧಿಸಿದ ಕಾಲ್ ಸೆಂಟರ್ಗಳು, ಆನ್ಲೈನ್ ಶಿಕ್ಷಣ, ದೂರ ಶಿಕ್ಷಣಗಳಿಗೆ ಅನುಮತಿ ನೀಡಲಾಗುತ್ತಿದೆ.
- ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಈಗ ಎಲ್ಲ ರೀತಿಯ ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ಕ್ಷೇತ್ರ ಕಾರ್ಯಾಚರಣೆಯಲ್ಲಿ ಇರಲಿದೆ. ಯಾವುದೇ ಅಡಚಣೆ ಇಲ್ಲದೇ ಸಾರ್ವಜನಿಕ ಸೇವೆಗಳು ಸಿಗಲಿವೆ. ಅಗತ್ಯ ವಸ್ತಗಳ ಪೂರೈಕೆಯಲ್ಲೂ ಯಾವುದೇ ಅಡಚಣೆ ಇರಲಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳ ಕಚೇರಿಗಳು ಅಗತ್ಯ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಿಸಲಿದೆ.
- ಒಟ್ಟಾರೆ ಹೇಳುವುದಾದರೆ, ಪರಿಷ್ಕೃತ ಮಾರ್ಗಸೂಚಿಯು ಆರ್ಥಿಕತೆ ಬೆಳವಣಿಗೆಗೆ ಅತೀ ಅವಶ್ಯವಾಗಿರುವ ಎಲ್ಲ ಕ್ಷೇತ್ರಗಳು ಕಾರ್ಯಾಚರಿಸುವುದಕ್ಕೆ ಅನುಕೂಲವಾಗಿಯೇ ಇದೆ. ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಜನೆಗೆ ಅವಕಾಶವೂ ಇದೆ. ಇವು ಕಾರ್ಯಾಚರಣೆ ಮಾಡುವ ವೇಳೆ COVID19 ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಪಾಲಿಸಬೇಕಾದ್ದು ಕಡ್ಡಾಯ.
ಈ ಬಗ್ಗೆ ಹೆಚ್ಚಿನ ವಿವರ, ಸಮಗ್ರ ವರದಿಗೆ ನಾಳಿನ (ಏಪ್ರಿಲ್ 16) ವಿಜಯವಾಣಿ ಓದಿ..