ನ್ಯೂಸ್

ಶೀಘ್ರವೇ ಜನ ವಸತಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ: ಮಾರ್ಚ್​ನೊಳಗೆ ಪ್ರಾಥಮಿಕ ಅಧಿಸೂಚನೆಗೆ ಮುಖ್ಯಮಂತ್ರಿ ಗಡುವು

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯಾದ್ಯಂತ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಡಿಸಿ ನ್ಯಾಯಾಲಯಗಳಲ್ಲಿ ಕಳೆದ ಡಿಸೆಂಬರ್ ಅಂತ್ಯಕ್ಕೆ ಬಾಕಿಯಿರುವ 1.32 ಲಕ್ಷ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದ್ದಾರೆ.

ತಹಸೀಲ್ದಾರ್, ಎಸಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಬದಲಿಗೆ ಎಡಿಸಿಯನ್ನು ಪ್ರತ್ಯಾಯೋಜಿಸುವ ಅಥವಾ ವಿಶೇಷ ಜಿಲ್ಲಾಧಿಕಾರಿ ಹುದ್ದೆ ಸೃಜಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಳೆದ ಡಿಸೆಂಬರ್ 31ರಂದು ಬೆಂಗಳೂರಿನಲ್ಲಾದ ಸಮ್ಮೇಳನದಲ್ಲಿ ಎಲ್ಲ ಡಿಸಿಗಳಿಗೆ ಸಿಎಂ ನಿರ್ದೇಶಿಸಿದ್ದರು. ಈಗ ಪ್ರಕರಣಗಳ ಇತ್ಯರ್ಥಕ್ಕೆ ಪ್ರತ್ಯಾಯೋಜನೆ/ವಿಶೇಷ ಹುದ್ದೆ ರಚನೆಗೆ ಸರ್ಕಾರ ಮುಂದಾಗಿದೆ. ನೋಟಿಸ್ ರಹಿತ ಮ್ಯುಟೇಷನ್ ಪ್ರಕರಣಗಳನ್ನು 3 ದಿನದ ಬದಲು 2 ದಿನದಲ್ಲಿ ಹಾಗೂ ನೋಟಿಸ್ ಸಹಿತ ಮ್ಯುಟೇಷನ್ ಪ್ರಕರಣಗಳನ್ನು (ವಿವಾದಾಸ್ಪದ ಹೊರತು ಪಡಿಸಿ) 38 ದಿನಗಳ ಬದಲು 35 ದಿನಗಳಲ್ಲಿ ವಿಲೇವಾರಿ ಮಾಡುವ ಕಾರ್ಯದ ಮೇಲುಸ್ತುವಾರಿ ಹೊಣೆಯನ್ನು ಪ್ರಾದೇಶಿಕ ಆಯುಕ್ತರ ಮೇಲೆ ಹೊರಿಸಲಾಗಿದೆ.

ಕಂದಾಯ ಗ್ರಾಮ: 2021ರ ಡಿಸೆಂಬರ್ ಬಾಕಿ ಇರುವ 1912 ದಾಖಲೆಗಳಿಲ್ಲದ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೊಷಿಸುವ ಸಲುವಾಗಿ ಮಾರ್ಚ್ 2022ರೊಳಗೆ ಪ್ರಾಥಮಿಕ ಅಧಿಸೂಚನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿಗಳಿಗೆ ಗಡುವು ವಿಧಿಸಿದ್ದಾರೆ.

ನೋಟಿಸ್ ಕೊಡಿ: ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಬಾಕಿ ಇರುವ ಪರಿಹಾರವನ್ನು ಕೂಡಲೆ ಸಂತ್ರಸ್ತರಿಗೆ ಬಿಡುಗಡೆ ಮಾಡಬೇಕು. 2019 ಹಾಗೂ 2020 ರ ಸಾಲಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಆದ ಬಳಿಕವೂ ಮರುನಿರ್ವಣ ಕಾಮಗಾರಿಯನ್ನು ಸಂತ್ರಸ್ತರು ಕೈಗೊಳ್ಳದೇ ಇದ್ದರೆ ಅಂಥವುಗಳನ್ನು ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.

ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ಜಿಲ್ಲಾಧಿಕಾರಿಯನ್ನು ನೇಮಿಸುವಂತೆ ನಮ್ಮ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್​ನಿಂದ ಮೃತಪಟ್ಟಿರುವವರ ನೊಂದ ಕುಟುಂಬಗಳಿಗೆ ಪರಿಹಾರ ವಿತರಣೆ ಯಾವುದೂ ಬಾಕಿ ಇಲ್ಲ. | ಕವಿತಾ ಎಸ್.ಮನ್ನಿಕೇರಿ ಡಿಸಿ ಚಿತ್ರದುರ್ಗ
ಸಿಎಂ ಇತರೆ ನಿರ್ದೇಶನಗಳು: ಸಾಮಾಜಿಕ ಭದ್ರತೆ ಯೋಜನೆಗಳ ಪಿಂಚಣಿ ಫಲಾನುಭವಿಗಳ ನವೋದಯ ಮೊಬೈಲ್ ಆಪ್ ಆಧಾರಿತ ವಾರ್ಷಿಕ ಪರಿಶೀಲನಾ ಕಾರ್ಯವನ್ನು ಫೆಬ್ರವರಿಯೊಳಗೆ ಪೂರ್ಣಗೊಳಿಸುವಂತೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಎಲ್ಲ ಭೂ ಪರಿವರ್ತನೆ ಅರ್ಜಿಗಳನ್ನು 30ದಿನದೊಳಗೆ ವಿಲೇ ಮಾಡಬೇಕು ಎಂದು ಸೂಚಿಸಿದ್ದಾರೆ.

ಮಾರ್ಚ್​ನೊಳಗೆ ರುದ್ರಭೂಮಿ: ರುದ್ರಭೂಮಿ ಹೊಂದಿಲ್ಲದ ರಾಜ್ಯದ ಗ್ರಾಮಗಳಿಗೆ ಮಾರ್ಚ್ ಒಳಗೆ ರುದ್ರಭೂಮಿ ಒದಗಿಸಬೇಕು. ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ವಿವಾದಾಸ್ಪದ ಮ್ಯುಟೇಷನ್ ಪ್ರಕರಣಗಳನ್ನು ಮಾರ್ಚ್​ನೊಳಗೆ ಇತ್ಯರ್ಥಪಡಿಸಬೇಕು, ಇನ್​ಫುಟ್ ಸಬ್ಸಿಡಿಯನ್ನು ಶೀಘ್ರ ವಿತರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.