ಬೆಂಗಳೂರು: ವಾಣಿಜ್ಯ ಬಳಕೆಯ ಲಕ್ಸುರಿ ಬಸ್ಸುಗಳು ಹಾಗೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ‘ನೋಂದಣಿ’ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರಿಂದ ಖಜಾನೆಗೆ ಸೇರಬೇಕಾದ ನೂರಾರು ಕೋಟಿ ರೂ. ರಸ್ತೆ ತೆರಿಗೆ ಹಣ ಅನ್ಯ ರಾಜ್ಯಗಳ ಪಾಲಾಗುತ್ತಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಅಂದಾಜಿನ ಪ್ರಕಾರ ವಾರ್ಷಿಕ 300 ರಿಂದ 400 ಕೋಟಿ ರೂ. ತೆರಿಗೆ ಕೈಜಾರುತ್ತಿದೆ! ಅಷ್ಟೇ ಅಲ್ಲ, ಲಕ್ಸುರಿ ಬಸ್ ಮಾಲೀಕರು ಮೂರು ತಿಂಗಳ ಬದಲು ತಿಂಗಳಿಗೊಮ್ಮೆ ತೆರಿಗೆ ಪಾವತಿಸುವುದಕ್ಕೆ ಆನ್ಲೈನ್ ವ್ಯವಸ್ಥೆ ಕಲ್ಪಿಸುವಲ್ಲೂ ಇಲಾಖೆ ಉದಾಸೀನ ತೋರಿದೆ.
ರಾಜ್ಯದಲ್ಲಿ ಹೊಸದಾಗಿ ರಸ್ತೆಗಿಳಿಯುವ ಹೈಎಂಡ್ ಕಾರುಗಳು ಹಾಗೂ ಖಾಸಗಿ ಬಸ್ಸುಗಳಲ್ಲಿ ಶೇ.30ರಿಂದ ಶೇ.40ರಷ್ಟು ವಾಹನಗಳು ಹೊರ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗುತ್ತಿವೆ. ಇದಕ್ಕೆ ಕಾರಣ ರಾಜ್ಯದಲ್ಲಿ ರಸ್ತೆ ತೆರಿಗೆ ಮೊತ್ತ ಸಿಕ್ಕಾಪಟ್ಟೆ ಜಾಸ್ತಿಯಾಗಿರುವುದು. ಹೀಗಾಗಿ ವಾಹನ ಮಾಲೀಕರು ಹಣ ಉಳಿಸಲು ಅನ್ಯ ರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ತೆರಿಗೆ ದುಡ್ಡು ಪರರಾಜ್ಯಗಳ ಖಜಾನೆ ಸೇರುತ್ತಿದೆ.
ದೇಶಾದ್ಯಂತ ವಾಹನ ಮಾರಾಟಕ್ಕೆ ಎಕ್ಸ್-ಶೋ ರೂಮ್ ದರ ಒಂದೇ ರೀತಿ ಇರುತ್ತದೆ. ಆದರೆ, ರಸ್ತೆಗಿಳಿಯಲು ವಿಧಿಸುವ ತೆರಿಗೆ ಬೇರೆ ಬೇರೆಯಾಗಿರುತ್ತದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಕನಿಷ್ಠ ಶೇ.13ರಿಂದ ಗರಿಷ್ಠ ಶೇ.20ರಷ್ಟು ಇದೆ. ಅರುಣಾಚಲಪ್ರದೇಶ, ರಾಜಸ್ಥಾನ, ಪುದುಚೇರಿ, ಗುಜರಾತ್, ನಾಗಾಲ್ಯಾಂಡ್, ಮಹಾರಾಷ್ಟ್ರ ಸೇರಿ ಇನ್ನಿತರ ರಾಜ್ಯಗಳಲ್ಲಿ ಅತಿ ಕಡಿಮೆ ಅಂದರೆ ಶೇ.6, ಶೇ.8 ಹಾಗೂ ಶೇ.10ರಷ್ಟು ಇದೆ. ಹೀಗಾಗಿ ಬೇರೆ ರಾಜ್ಯಗಳಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಿಸಿ, ರಾಜ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.
ತೆರಿಗೆ ಯಾಕೆ ಇಳಿಸಬೇಕು?
ಮಾಲೀಕರ ವಾದವೇನು?
ಮಾಸಿಕ ತೆರಿಗೆ ತುಂಬುವ ವ್ಯವಸ್ಥೆ ಜಾರಿ ಇಲ್ಲ: ಮಾಲೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಲಕ್ಸುರಿ ಬಸ್ಗಳಿಗೆ ತ್ರೖೆಮಾಸಿಕ ಬದಲು ಮಾಸಿಕ ತೆರಿಗೆ ತುಂಬಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ 2022ರ ಏ.1ರಂದೇ ಆದೇಶ ಹೊರಡಿಸಿದೆ. ಆದರೆ, ಇದಾಗಿ ಮೂರು ತಿಂಗಳಾದರೂ ಈವರೆಗೆ ಆನ್ಲೈನ್ನಲ್ಲಿ ಮಾಸಿಕ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಿಲ್ಲ. ತ್ರೖೆಮಾಸಿಕವಾಗಿಯೇ ತೆರಿಗೆ ಪಾವತಿಸಬೇಕಾಗಿದ್ದು, ಸಣ್ಣ ಬಸ್ ಮಾಲೀಕರಿಗೆ ಹೊರೆಯಾಗಿದೆ.
ಇಲ್ಲಿ ಐದು ಲಕ್ಷ, ಅಲ್ಲಿ ಒಂದೂವರೆ ಲಕ್ಷ ರೂ.!: ರಾಜ್ಯದಲ್ಲಿ ಖಾಸಗಿ ಬಸ್ ರಿಜಿಸ್ಟ್ರೇಷನ್ ಮಾಡಿಸಿ ದರೆ -ಠಿ;5 ಲಕ್ಷ ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ. ಅದೇ ಪುದುಚೇರಿಯಲ್ಲಿ ನೋಂದಣಿ ಮಾಡಿಸಿದರೆ ಒಂದೂವರೆ ಲಕ್ಷ ರೂ. ನೀಡಿದರೆ ಸಾಕು. ಅಂದರೆ, ಬರೋಬ್ಬರಿ ಮೂರೂವರೆ ಲಕ್ಷ ರೂ. ಉಳಿತಾಯ ವಾಗುತ್ತದೆ. ಅದೇ ರೀತಿ ಕರ್ನಾಟಕದಲ್ಲಿ -ಠಿ;50 ಲಕ್ಷ ಮೊತ್ತದ ಕಾರು ಖರೀದಿಸಿದರೆ, -ಠಿ;10 ಲಕ್ಷ ತೆರಿಗೆ ಪಾವತಿಸಿ ನೋಂದಣಿ ಮಾಡಬೇಕು. ಇದೇ ಮೊತ್ತದ ಕಾರು ನೋಂದಣಿಗೆ ಪುದುಚೇರಿಯಲ್ಲಿ -ಠಿ;2 ಲಕ್ಷ ತೆರಿಗೆ ವಿಧಿಸಲಾಗುತ್ತದೆ. ಇದೇ ಕಾರಣಕ್ಕೆ ಮಾಲೀಕರು ಹೊರರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ.
ನಿತ್ಯ 1600 ವಾಹನ ನೋಂದಣಿ: ಹೊರರಾಜ್ಯಗಳಲ್ಲಿ ನೋಂದಣಿ ಆಗುವ ವಾಹನಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಸರಾಸರಿ 1,100 ದ್ವಿಚಕ್ರ ವಾಹನ, 300 ಕಾರುಗಳು ಸೇರಿ ಪ್ರತಿನಿತ್ಯ 1,600 ವಿವಿಧ ವಾಹನಗಳು ನೋಂದಣಿಯಾಗುತ್ತಿವೆ ಎಂಬ ಮಾಹಿತಿ ಇದೆ.
‘ಒಂದು ರಾಷ್ಟ್ರ ಒಂದು ರಹದಾರಿ’ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ತಮಿಳುನಾಡು, ಕೇರಳ, ತೆಲಂಗಾಣ ಸೇರಿ ಕೆಲ ರಾಜ್ಯಗಳು ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ರಸ್ತೆ ತೆರಿಗೆ ಕಡಿಮೆ ಮಾಡಿದರೆ ಬೇರೆ ರಾಜ್ಯಗಳ ಪಾಲಾಗುತ್ತಿರುವ ಆದಾಯ ಕರ್ನಾಟಕದ ಖಜಾನೆ ಸೇರುತ್ತದೆ. ಆದರೆ, ಸಾರಿಗೆ ಇಲಾಖೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ.
ಕಾನೂನಿನಲ್ಲಿ ಅವಕಾಶ ಇಲ್ಲ?: ಹೊರ ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ಕರ್ನಾಟಕದೊಳಗೇ ಖಾಯಂ ಆಗಿ ಸಂಚರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಆಗಾಗ ವಿಶೇಷ ಕಾರ್ಯಾಚರಣೆ ನಡೆಸಿ ಅಂತಹ ವಾಹನಗಳನ್ನು ಜಪ್ತಿ ಮಾಡುತ್ತಿರುತ್ತಾರೆ. ದಂಡ ವಸೂಲಿ ಮಾಡುವುದರ ಜತೆಗೆ ಐಪಿಎಸ್ ಸೆಕ್ಷನ್ನಡಿ ಕ್ರಿಮಿನಲ್ ಕೇಸ್ ದಾಖಲಿಸಲೂ ಆರ್ಟಿಒ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ರಾಜ್ಯದೊಳಗೆ ಮಾತ್ರ ಸಂಚರಿಸುವ ವಾಹನಗಳು ಹೊರರಾಜ್ಯದಲ್ಲಿ ನೋಂದಣಿಯಾಗಿರುವ ಮಾಹಿತಿ ಗೊತ್ತಿದ್ದರೂ ಕೆಲ ಅಧಿಕಾರಿಗಳು, ಲಂಚ ಪಡೆದು ಸುಮ್ಮನಿದ್ದಾರೆ ಎಂಬ ಆರೋಪವೂ ಇದೆ.
ನಕಲಿ ದಾಖಲೆ ಸೃಷ್ಟಿಸುವ ಜಾಲ ಸಕ್ರಿಯ: ಯಾವುದೇ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಬೇಕಾದರೆ ಖರೀದಿದಾರ ಸ್ಥಳೀಯವಾಗಿ ವಾಸವಿರುವ ದೃಢೀಕರಣ ಪತ್ರ ಸಲ್ಲಿಸಬೇಕು. ಇದಕ್ಕಾಗಿ ಪರ ರಾಜ್ಯಗಳಲ್ಲಿ ಮಧ್ಯವರ್ತಿಗಳ ಜಾಲ ಸಕ್ರಿಯವಾಗಿದ್ದು, ಇಲ್ಲೇ ತಾತ್ಕಾಲಿಕವಾಗಿ ವಾಸವಿರುವವರಂತೆ ವಾಹನ ಖರೀದಿಸುವವರ ಹೆಸರಲ್ಲಿ ನೋಟರಿ ಪ್ರಮಾಣಪತ್ರ ಮಾಡಿಸಿ, ವಿಳಾಸ ದೃಢೀಕರಣಕ್ಕಾಗಿ ಖರೀದಿದಾರನ ಹೆಸರಲ್ಲೇ ಎಲ್ಐಸಿ ಪಾಲಿಸಿ ಮಾಡಿಸುತ್ತಾರೆ. ನೋಟರಿ ಪ್ರಮಾಣಪತ್ರ ಹಾಗೂ ಎಲ್ಐಸಿ ಪಾಲಿಸಿಯನ್ನೇ ಅಲ್ಲಿನ ಸಾರಿಗೆ ಪ್ರಾದೇಶಿಕ ಕಚೇರಿಗೆ ಸಲ್ಲಿಸಿ ವಾಹನ ನೋಂದಣಿ ಮಾಡಿಸುತ್ತಾರೆ. ಇದಕ್ಕೆ ಸ್ಥಳೀಯ ಕಾರು ಡೀಲರ್ಗಳೂ ನೆರವು ಕೊಡುತ್ತಾರೆ.