ಆಸಕ್ತಿಯಿದ್ದಾಗ ಹಿಡಿದ ಕೆಲಸ ಮಾಡಿ ಮುಗಿಸಬೇಕು. ಮನಸ್ಸಿಲ್ಲದೆ ಏನನ್ನೇ ಮಾಡಲು ಪ್ರಯತ್ನಿಸಿದರೂ ಹೊಳೆಯಲ್ಲಿ ಹುಣಸೆ ಕಿವುಚಿದಂತೆ ಎಂಬ ಉಕ್ತಿಯನ್ನು ಪಾಲಿಸುವವರು ರೆವೆನ್ಯೂ ಇನ್ಸ್‌ಪೆಕ್ಟರ್ ಸತ್ಯಮ್ಮ.
ಕೌಟುಂಬಿಕ ಹಿನ್ನೆಲೆ
ರಾಯಚೂರು ಜಿಲ್ಲೆ, ಸಿಂಧನೂರು ತಾಲೂಕಿನ ಗಿಣಿವಾರ ಗ್ರಾಮದ ಮುದುಕಪ್ಪ ಹಾಗೂ ಸಾವಿತ್ರಮ್ಮ ಅವರ ರೈತಾಪಿ ಕುಟುಂಬಕ್ಕೆ ಸೇರಿರುವ ಸತ್ಯಮ್ಮ, 6 ಜನ ಮಕ್ಕಳಲ್ಲಿ 3ನೇಯವರು. ಗಿಣಿವಾರದಲ್ಲಿನ ಪ್ರಾಥಮಿಕ ಶಾಲೆಯಲ್ಲಿ 1-6ನೇ ತರಗತಿ, ಬಾದರ್ಲಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ 7-8ನೇ ತರಗತಿ ಹಾಗೂ 9-10ನೇ ತರಗತಿಯನ್ನು ಒಳಗೊಳ್ಳಾರಿಯ ಹಿರಿಯ ಪ್ರೌಢ ಶಾಲೆಯಲ್ಲಿ ಮುಗಿಸಿದ್ದಾರೆ. ಜ್ಞಾನಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ದಾವಣಗೆರೆಯ ಬಾಪೂಜಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ಪದವೀಧರರಾಗಿದ್ದಾರೆ.
ಶೈಕ್ಷಣಿಕ ಸಾಧನೆ
ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮದಲ್ಲಿ ಹುಟ್ಟಿ-ಬೆಳೆದಿದ್ದರೂ ಸಹ ವಿದ್ಯೆಯ ಮಹತ್ವ ಅರಿತಿರುವ ಸತ್ಯಮ್ಮ, ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ಶಾಲೆಗೆ ಮೊದಲಿಗರಾಗಿದ್ದರು. ಅಲ್ಲದೇ ಪಿಯುಸಿಯಲ್ಲಿ ಕಾಲೇಜಿಗೆ 6ನೇ ರಾಂಕ್ ಬಂದಿದ್ದಾರೆ. ಜತೆಗೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡಿರುವ ಇವರು, ಎಲ್ಲ ಸೆಮಿಸ್ಟರ್‌ಗಳಲ್ಲಿಯೂ ಡಿಸ್ಟಿಂಕ್ಷನ್ ಪಡೆದಿರುವುದು ಶ್ಲಾಘನಾರ್ಹ.
ಪರೀಕ್ಷೆಯಲ್ಲಿನ ಏಳು-ಬೀಳು
2018ರಿಂದ ತಯಾರಿ ಪ್ರಾರಂಭಿಸಿದ್ದ ಸತ್ಯಮ್ಮ ದೆಹಲಿಯಲ್ಲಿ 6-7 ತಿಂಗಳು ತರಬೇತಿ ಪಡೆದಿದ್ದರು. ನಂತರ ಬೆಂಗಳೂರಿನಲ್ಲಿ ಸ್ವ-ತಯಾರಿ ಪ್ರಾರಂಭಿಸಿದ್ದ ಇವರು ಯುಪಿಎಸ್ಸಿ, ಎಫ್ಡಿಎ, ಎಸ್‌ಡಿಎ, ಪಿಎಸ್‌ಐ ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಹಲವು ಪರೀಕ್ಷೆ ತೆಗೆದುಕೊಂಡು ನಾಪಾಸ್ ಆದರು ಸಹ ಛಲ ಬಿಡದ ತ್ರಿವಿಕ್ರಮನಂತೆ 2020ರಲ್ಲಿ ಕೆಪಿಎಸ್ಸಿ ನಡೆಸಿದ್ದ ಕೆಎಎಸ್ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 2022ರಲ್ಲಿ ಪ್ರಕಟಗೊಂಡ ಫಲಿತಾಂಶದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ 3ನೇ ರಾಂಕ್ ಅಲಂಕರಿಸುವ ಮೂಲಕ ಪ್ರಸ್ತುತ ಯಾದಗಿರಿಯಲ್ಲಿ ಪ್ರೊಬೇಷನರಿ ರೆವೆನ್ಯೂ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯನಿರತರಾಗಿದ್ದಾರೆ.
ಸತ್ಯ ಅವರ ತಯಾರಿ ....
ಕೆಲವರು ಗಮನ ಕೇಂದ್ರೀಕರಿಸಲು ರಾತ್ರಿ ವೇಳೆಯೇ ಸೂಕ್ತ ಎಂದರೆ, ಹಲವರು ಹಗಲಿನಲ್ಲಿ ಓದುತ್ತಾರೆ. ಹಾಗೆಯೇ, ಸತ್ಯಮ್ಮ ಅವರು ಸಹ ಬೆಳಗ್ಗೆ 5:30ಯಿಂದ 10 ಗಂಟೆವರೆಗೂ ಓದಲು ಕೂರುತ್ತಿದ್ದರು. ಜತೆಗೆ ನ್ಯೂಸ್ ಪೇಪರ್ ಓದುವುದು, ಬರವಣಿಗೆ ವೇಗ ವೃದ್ಧಿಸಿಕೊಳ್ಳಲು ರೈಟಿಂಗ್ ಪ್ರ್ಯಾಕ್ಟಿಸ್ ಮಾಡುವುದು, ಟೆಸ್ಟ್ ಸಿರೀಸ್ ತೆಗೆದುಕೊಳ್ಳುವುದನ್ನು ಮಾಡುತ್ತಿದ್ದರು. ಇದರ ಜತೆಗೆ ಪರೀಕ್ಷೆಯೆಡೆಗಿನ ಸ್ಫೂರ್ತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ಹಲವು ಸ್ಪರ್ಧಾ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರು. ಹಾಗೆಯೇ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ನೀಡುವ ಮೂಲಕ ಇತರರಿಗೂ ನೆರವಾಗುತ್ತಿದ್ದರು.
ಕೆಎಎಸ್ ಪ್ಯಾಟರ್ನ್
ಕೆಎಎಸ್ ಪರೀಕ್ಷೆಯ ಪ್ರಿಲಿಮ್ಸ್ ಹಂತವು 2 ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು, ಪೇಪರ್-1 ಸಾಮಾನ್ಯ ಜ್ಞಾನಧಾರಿತ ಪ್ರಶ್ನೆಪತ್ರಿಕೆಯಾದರೆ, ಪೇಪರ್-2 ಗಣಿತ, ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ವಿಷಯಾಧಾರಿತ ಪತ್ರಿಕೆಯಾಗಿದ್ದು, 2 ಪತ್ರಿಕೆಗಳ ಅಂಕವನ್ನು ಮೆರಿಟ್ ಲಿಸ್ಟ್‌ಗೆ ಪರಿಗಣಿಸಲಾಗುತ್ತದೆ. ಮುಖ್ಯಪರೀಕ್ಷೆಯಲ್ಲಿ 2 ಎಸ್ಸೆ ಪೇಪರ್‌ಗಳಿವೆ. ತಲಾ 125 ಅಂಕ ನಿಗದಿಗೊಳಿಸಲಾಗಿದ್ದು, ಕಡ್ಡಾಯವಾಗಿ ಬರೆಯಲೇ ಬೇಕು. ಉಳಿದಂತೆ 4 ಸಾಮಾನ್ಯ ಜ್ಞಾನ ಪತ್ರಿಕೆಗಳು ವಿಷಯಾಧಾರಿತವಾಗಿವೆ. ಇನ್ನು 50 ಅಂಕಗಳಿಗೆ ಸಂದರ್ಶನ ನಡೆಯಲಿದ್ದು, ದ್ವಿಭಾಷೆಯಲ್ಲಿಯೂ ಉತ್ತರಿಸಲು ಅವಕಾಶವಿದೆ.
ಭಾಷೆ ಬಾಧಕವಲ್ಲ
ಗೌರವಯುತ ಸ್ಥಾನ ಅಲಂಕರಿಸುತ್ತೇವೆ ಎಂದಾಗ ಪ್ರತಿ ಭಾಷೆಯು ಮುಖ್ಯವಾಗುತ್ತದೆ. ಅಧಿಕಾರಿಯಾಗಿ ತಂಡವನ್ನು ಮುನ್ನಡೆಸಬೇಕು ಎಂದರೆ ಗೊತ್ತಿಲ್ಲ, ಆಗುವುದಿಲ್ಲ ಎಂಬುದು ನಮ್ಮ ಬಳಿ ಸುಳಿಯಬಾರದು. ಕನ್ನಡ ಮಾಧ್ಯಮದಲ್ಲೇ ಓದಿದ್ದರೂ ಸಹ ವ್ಯಾವಹಾರಿಕ ಭಾಷೆಯಾದ ಇಂಗ್ಲಿಷ್ ಮೇಲೆ ಹಿಡಿತ ಸಾಧಿಸುವುದು ಪ್ರಸ್ತುತ ಸ್ಪರ್ಧಾ ಜಗತ್ತಿನಲ್ಲಿ ಅನಿವಾರ್ಯ. ಭಾಷೆಯನ್ನು ಬಾಧಕವೆಂದು ಪರಿಗಣಿಸದೆ ಅದನ್ನೇ ಸಾಧನವಾಗಿ ಮಾಡಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿಯೇ ಶಾಲಾ ಶಿಕ್ಷಣ ಮುಗಿಸಿರುವ ಸತ್ಯಮ್ಮ, ಕಾಲೇಜಿನಿಂದ ಇಂಗ್ಲಿಷ್ ಗಂಧಗಾಳಿ ಅರಿಯಲು ಶ್ರಮಿಸಿ ಇಂದು ನಿರ್ಗಗಳವಾಗಿ ಇಂಗ್ಲಿಷ್ ಮಾತನಾಡುತ್ತ ಅಧಿಕಾರಿಯಾಗಿ ನಿಂತಿರುವುದು ಸಾಧನೆಯೇ ಸರಿ.
ಕಿವಿಮಾತು
ಬಲವಂತವಾಗಿ ಓದುವುದು, ಇತರರನ್ನು ಅನುಕರಿಸುವುದು ಬೇಡ. ಓದಲು ಮನಸ್ಸಿಲ್ಲದಿದ್ದಾಗ ಗುಂಪು ಚರ್ಚೆ, ಮನಸ್ಸಿನ ಒತ್ತಡ ಕಳೆಯಲು ಆಟೋಟ, ಇತರ ಆಸಕ್ತಿದಾಯಕ ಪುಸ್ತಕಗಳನ್ನು ಓದುವುದನ್ನು ಮಾಡಬೇಕು.
ವರ್ಷ.ಎಸ್ ಬೆಂಗಳೂರು