ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿರುವ ವಿದ್ಯುತ್ ಬೇಡಿಕೆ ತಗ್ಗಿದೆ. ವಿದ್ಯುದಾಗರಗಳಿಗೆ ಒಳಹರಿವು ಶುರುವಾಗಿದೆ. ದಿನದ ಗರಿಷ್ಠ ಬಳಕೆ ಅವಧಿಯಲ್ಲಿ 17220 ಸಾವಿರ ಮೆಗಾ ವಾಟ್‌ಗೆ ವಿದ್ಯುತ್ ಬೇಡಿಕೆ ಪ್ರಮಾಣ ತಲುಪಿತ್ತು. ಉತ್ತಮ ಮಳೆಯ ಕಾರಣ ಬೇಡಿಕೆ ಪ್ರಮಾಣವೀಗ 8,200 ಮೆಗಾ ವಾಟ್‌ಗೆ ಇಳಿದಿದೆ.
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡ ಕಡಿಮೆಯಾಗಿ, ಪ್ರೆಷರ್ ಕುಕ್ಕರ್‌ನಂತಹ ಸ್ಥಿತಿಗೆ ಸಿಲುಕಿದ್ದ, ಅಧಿಕಾರಿಗಳು, ಇಂಜಿನಿಯರ್‌ಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಮಳೆ ಕೊರತೆ, ಜಲಾಶಯಗಳಲ್ಲಿ ನೀರು ಶೇಖರಣೆ ಕುಸಿತದ ನಡುವೆ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್ ಹೇರದೆ ವಿದ್ಯುತ್ ಬೇಡಿಕೆ ನಿರ್ವಹಿಸಿದ ರೀತಿಯನ್ನು ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಮಾಧ್ಯಮದವರಿಗೆ ಸೋಮವಾರ ವಿವರಿಸಿದರು.
ವಿದ್ಯುತ್ ಬೇಡಿಕೆ ಸರಿದೂಗಿಸಲು ದುಬಾರಿ ದರದಲ್ಲಿ ಖರೀದಿಸುವ ಬದಲ ವಿನಿಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಸೆಕ್ಷನ್ 11ಇ ಜಾರಿಗೊಳಿಸಿ, ರಾಜ್ಯದ ಖಾಸಗಿ ಉತ್ಪಾದಕರ ವಿದ್ಯುತ್‌ನ್ನು ಗ್ರಿಡ್ ಪಡೆಯಲಾಯಿತು.
ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಜತೆಗೆ 2023ರ ನವೆಂಬರ್‌ನಿಂದ 2024ರ ಮೇವರೆಗೆ ವಿನಿಮಯ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಪೂರೈಸಲಾಗಿದೆ. ಜೂನ್ 16ರಿಂದ ಎರಡೂ ರಾಜ್ಯಗಳಿಗೆ ವಿನಿಮಯ ಮಾಡಿಕೊಂಡ ವಿದ್ಯುತ್ ಹಿಂತಿರುಗಿಸಲಾಗುತ್ತಿದೆ ಎಂದು ತಿಳಿಸಿದರು.
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಈ ಬಾರಿ ಗರಿಷ್ಠ ವಿದ್ಯುತ್ ಉತ್ಪಾದನೆಯಾಗಿದೆ. ಜನವರಿಯಿಂದ ಮೇ ವರೆಗೆ ಪ್ರತಿನಿತ್ಯ ಸರಾಸರಿ ಎರಡು ಸಾವಿರ ದಶಲಕ್ಷ ಯೂನಿಟ್ ಉತ್ಪಾದಿಸಿದ್ದರೆ, ಏಪ್ರಿಲ್‌ನಲ್ಲಿ 2,400 ದಶಲಕ್ಷ ಯೂನಿಟ್ ಉತ್ಪಾದನೆಯಾಗಿದೆ.
ತಾಂತ್ರಿಕ ಸಮಸ್ಯೆ ನಡುವೆ ಆರ್‌ಟಿಪಿಎಸ್ ಏಳು ಘಟಕಗಳು ಸಾಮರ್ಥ್ಯದ ಶೇಕಡ 85ರಷ್ಟು, 210 ಮೆ.ವಾ. ಸಾಮರ್ಥ್ಯ ಮೂರನೇ ಘಟಕದಲ್ಲಿ 216 ಮೆ.ವಾ. ಉತ್ಪಾದಿಸಿ ಹೊಸ ದಾಖಲೆ ಸೃಷ್ಟಿಸಿದ್ದು, ಶಾಖೋತ್ಪನ್ನ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆಯಾಗದಂತೆ ನಿಗಾವಹಿಸಲಾಯಿತು.
ಎಚ್ಚರಿಕೆಯ ಹೆಜ್ಜೆ
ಜಲ ಮೂಲದ ವಿದ್ಯುತ್ ಉತ್ಪಾದನೆಯಲ್ಲಿ ಎಚ್ಚರಿಕೆಯ ಹೆಜ್ಜೆಯಿಡಲಾಯಿತು. 2023-24ನೇ ಸಾಲಿನಲ್ಲಿ ಒಟ್ಟಾರೆ 8,860 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದರೆ, 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 1,110 ದಶಲಕ್ಷ ಯೂನಿಟ್ ಉತ್ಪಾದಿಸಲಾಗಿದೆ.
ಮಳೆ ವ್ಯತ್ಯಯವಾದರೂ ಜೂನ್ ಅಂತ್ಯದವರೆಗೆ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಿ, ಜಲ ವಿದ್ಯುದಾಗರಗಳಲ್ಲಿ ಜಲ ಸಂಗ್ರಹ ಕಾದಿಟ್ಟುಕೊಳ್ಳಲಾಗಿದೆ ಎಂದು ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.