ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಭೀಕರ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಕೊಲೆ ಪ್ರಕರಣ ಸಂಬಂಧ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿಯನ್ನು ಬಂಧಿಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ. ತಾನೇ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಪಲ್ಲವಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ನಡೆದ ವೇಳೆ ಪುತ್ರಿ ಕೃತಿ ಸಹ ಮನೆಯಲ್ಲೇ ಇದುದ್ದರಿಂದ ಆಕೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖೆ ವೇಳೆ ಆಕೆಯ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಆರೋಪಿ ಪಲ್ಲವಿ ವಿರುದ್ಧ ಮಾತ್ರ ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕೌಟುಂಬಿಕ ಕಾರಣಗಳಿಂದಲೇ ಹತ್ಯೆ:
ಸಿಸಿಬಿ ತನಿಖೆಯಲ್ಲಿ ಓಂ ಪ್ರಕಾಶ್ ಕೊಲೆಗೆ ಪ್ರಮುಖ ಕಾರಣಗಳು ಪತ್ತೆಯಾಗಿವೆ. ಓಂ ಪ್ರಕಾಶ್ ಅವರು ಕುಟುಂಬದ ಬಗ್ಗೆ ತಳೆದ ನಿರ್ಲಕ್ಷ್ಯ ಹಾಗೂ ಕೌಟುಂಬಿಕ ಮನಸ್ತಾಪವೇ ಒಂ ಪ್ರಕಾಶ್ ಕೊಲೆ ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಓಂ ಪ್ರಕಾಶ್ ಅವರು ಪತ್ನಿ ಮತ್ತು ಮಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಮಗಳ ಮದುವೆ ಬಗ್ಗೆ ಆಸಕ್ತಿ ತೋರಲಿಲ್ಲ. ಆರ್ಥಿಕವಾಗಿ ಸದೃಢರಾಗಿದ್ದರೂ ಪತ್ನಿ ಮತ್ತು ಮಗಳ ಖರ್ಚಿಗೆ ಹೆಚ್ಚಿನ ಹಣ ಕೊಡುತ್ತಿರಲಿಲ್ಲ. ಮನೆಯಲ್ಲಿ ಸಣ್ಣ ವಿಚಾರಕ್ಕೆ ಗಲಾಟೆಗಳು ಆದಾಗ ಓಂ ಪ್ರಕಾಶ್ ಅವರು ತಮ್ಮ ತಂಗಿ ಮನೆಗೆ ಹೋಗುತ್ತಿದ್ದರು. ಈ ನಡುವೆ ಪಲ್ಲವಿ ಮತ್ತು ಆಕೆಯ ಪುತ್ರಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದರು. ಪತಿ ತನ್ನನ್ನು ಕೊಲೆ ಮಾಡುತ್ತಾರೆ ಎಂದು ಪಲ್ಲವಿ ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಪತಿ ಓಂ ಪ್ರಕಾಶ್ ಅವರನ್ನು ಪಲ್ಲವಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.