ಕೋಲಾರ: ಪಿಎಚ್.ಡಿ ಪರೀಕ್ಷೆಯನ್ನು ನಡೆಸಿ ಕೇವಲ ಒಂದು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿರುವುದು ಇತಿಹಾಸದಲ್ಲೇ ಇದೇ ಮೊದಲು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ವೇಣುಗೋಪಾಲ್ ಹೇಳಿದರು.
ನಗರದ ಬೆಂಗಳೂರು ಉತ್ತರ ವಿವಿಯ ಪ್ರಧಾನ ಕಚೇರಿಯಲ್ಲಿ 9 ವಿಷಯಗಳ ಪಿಎಚ್.ಡಿ ಕೋರ್ಸ್ನ 78 ಸಂಶೋಧನಾ ವಿದ್ಯಾರ್ಥಿಗಳಿಗೆ ಗುರುವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಅದರ ಬಳಕೆಯು ಹೆಚ್ಚಾಗುತ್ತಿದೆ. ಪರೀಕ್ಷೆ ನಡೆಸಿದ ದಿನವೇ ಫಲಿತಾಂಶ ಪ್ರಕಟಿಸುರುವುದು ಎಂದೂ ನಡೆದಿರಲು ಸಾಧ್ಯವಿಲ್ಲ ಎಂದರು.
ಕೇವಲ ಆರು ತಿಂಗಳಲ್ಲಿ ಪಿಎಚ್.ಡಿಯ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಕೋರ್ಸ್ ವರ್ಕ್ ತರಗತಿಗಳು, ಪರೀಕ್ಷೆಗಳನ್ನು ನಡೆಸಿ, ಒಂದು ಗಂಟೆಯಲ್ಲಿ ಫಲಿತಾಂಶ ನೀಡಿದ್ದಲ್ಲದೇ, ಅಭ್ಯರ್ಥಿಗಳಿಗೆ ತಾತ್ಕಾಲಿಕ ನೋಂದಣಿ ದೃಢೀಕರಣ ಪತ್ರ ವಿತರಿಸಲಾಗಿದೆ. ದೇಶದ ಮೊದಲ ವಿದ್ಯಾಲಯ ಎಂಬ ಖ್ಯಾತಿಗೆ ಉತ್ತರ ವಿವಿ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಕುಲಸಚಿವ ಶ್ರೀಧರ್, ಹಣಕಾಸು ಅಧಿಕಾರಿ ವಸಂತಕುಮಾರ್, ಮಂಗಸಂದ್ರ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಪ್ರೊ.ಕುಮುದಾ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಮುರಳಿಧರ್ ಇದ್ದರು.
* ಉತ್ತಮ ಕಾರ್ಯಕ್ಕೆ ವಿಳಂಬ ಸಲ್ಲದು
ಬೆಂಗಳೂರು ಉತ್ತರ ವಿವಿ ಆರಂಭಗೊಂಡ ನಂತರ ಇದು ಮೊದಲ ಮತ್ತು ಚೊಚ್ಚಲ ಪಿಎಚ್.ಡಿ ಕಾರ್ಯಕ್ರಮವಾಗಿದೆ. ಈ ಮೊದಲ ಅವಧಿಯಲ್ಲೇ ಹಲವು ದಾಖಲೆ ಮಾಡುವ ತವಕದಲ್ಲಿ ಕೆಲಸ ನಿರ್ವಹಿಸಿದ್ದೇವೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು. ಪಿಎಚ್.ಡಿ ಮಾಡಲು ಆಯ್ಕೆಯಾಗಿರುವ ಸಂಶೋಧನಾರ್ಥಿಗಳಿಗೆ ಅತ್ಯಂತ ತ್ವರಿತವಾಗಿ ಕೋರ್ಸ್ ವರ್ಕ್ ನಡೆಸಿ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರವನ್ನು ಒಂದೇ ದಿನದಲ್ಲಿ ವಿತರಿಸುತ್ತಿರುವುದು ಸಂತಸ ತಂದಿದೆ. ಇದರಿಂದ ವಿವಿಯಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿರುವ ವಿದ್ಯಾರ್ಥಿಗಳು ಶೀಘ್ರ ತಮ್ಮ ಸಂಶೋಧನಾ ಕಾರ್ಯ ಮುಗಿಸಿ ಡಾಕ್ಟರೇಟ್ ಪದವಿ ಪಡೆಯಲು ಸಹಕಾರಿಯಾಗಿದೆ. ವಿವಿ ಬಿ.ಇಡಿ ಮತ್ತಿತರ ಪರೀಕ್ಷಾ ಫಲಿತಾಂಶವನ್ನೂ ಒಂದೇ ದಿನದಲ್ಲಿ ಮೌಲ್ಯಮಾಪನ ಮಾಡಿ ನೀಡಿದ ಖ್ಯಾತಿ ಹೊಂದಿದೆ. ವಿವಿಯ ಧ್ಯೇಯ ಯಾವುದೇ ಉತ್ತಮ ಕಾರ್ಯಕ್ಕೆ ವಿಳಂಬ ಸಲ್ಲದು ಎಂಬುದಾಗಿದೆ ಎಂದರು.
* ಇತರೆ ಕ್ಷೇತ್ರಗಳಲ್ಲೂ ಸಾಧನೆಗೆ ಸಲಹೆ
ಸಂಶೋಧನಾ ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ ವಿವಿ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ಹೆಚ್ಚು ವಿಷಯಗಳ ಕುರಿತು ಸಂಶೋಧನೆ ನಡೆಸುವುದಕ್ಕೆ ವಿವಿಯು ಸಹಕಾರ ನೀಡುತ್ತದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಲೋಕನಾಥ್ ತಿಳಿಸಿದರು. ಶೀಘ್ರ ಸಂಶೋಧನೆ ಮುಕ್ತಾಯ ಮಾಡಿ ಮಹಾ ಪ್ರಬಂಧಗಳನ್ನು ಸಲ್ಲಿಸಿ ದೇಶದಾದ್ಯಂತ ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರೆ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.