ರಾಷ್ಟ್ರೀಯ ಸಬ್​ ಜೂನಿಯರ್​ ಈಜು: ಕರ್ನಾಟಕಕ್ಕೆ 5 ಚಿನ್ನದ ಪದಕ 
ನ್ಯೂಸ್

ರಾಷ್ಟ್ರೀಯ ಸಬ್​ ಜೂನಿಯರ್​ ಈಜು: ಕರ್ನಾಟಕಕ್ಕೆ 5 ಚಿನ್ನದ ಪದಕ

ಬೆಂಗಳೂರು: ಕರ್ನಾಟಕ ತಂಡ ಜೈಪುರದಲ್ಲಿ ನಡೆಯುತ್ತಿರುವ 42ನೇ ಸಬ್​ ಜೂನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನ (

sub junior swimming national championship

) 2ನೇ ದಿನ 5 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಸಹಿತ ಒಟ್ಟು 12 ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ 1 ಚಿನ್ನ, 3 ಬೆಳ್ಳಿ, 6 ಕಂಚಿನ ಸಹಿತ 10 ಪದಕ ಜಯಿಸಿತ್ತು.

ರಾಜ್ಯದ ಎಸ್​. ಕ್ರಿಷ್​ ಬಾಲಕರ 100 ಮೀ. ಬ್ಯಾಕ್​ಸ್ಟ್ರೊಕ್​ ಗ್ರೂಪ್​ 2 ಮತ್ತು 50 ಮೀ. ಫ್ರೀಸ್ಟೈಲ್​ ಗ್ರೂಪ್​ 3 ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬಾಲಕರ 200 ಮೀ. ಮೆಡ್ಲೆ ಗ್ರೂಪ್​ 3 (11-12 ವರ್ಷ) ವಿಭಾಗದಲ್ಲಿ ರಾಜ್ಯದ ಡೇನಿಯಲ್​ ಇಮ್ಯಾನ್ಯುಯೆಲ್​ ಸಾಲ್ದನಾ ಚಿನ್ನ ಜಯಿಸಿದರು. ಬಾಲಕಿಯರ 4/50 ಮೀ. ಫ್ರೀಸ್ಟೈಲ್​ ರಿಲೇ ಗ್ರೂಪ್​ 3 ವಿಭಾಗ ಮತ್ತು 4/100 ಮೀ. ಫ್ರೀಸ್ಟೈಲ್​ ರಿಲೇಯಲ್ಲಿ ರಾಜ್ಯ ತಂಡ ಚಿನ್ನದ ಪದಕ ಒಲಿಸಿಕೊಂಡಿತು.

ಬಾಲಕಿಯರ 200 ಮೀ. ಮೆಡ್ಲೆ ಗ್ರೂಪ್​ 2ರಲ್ಲಿ (13-14 ವರ್ಷ) ಮಾನ್ಯಾ ಆರ್​. ವಧ್ವ, 50 ಮೀ. ಫ್ರೀಸ್ಟೈಲ್​ ಗ್ರೂಪ್​2ರಲ್ಲಿ ಅರುಣಾ ಪವನ್​ ಆಳ್ವಾ ಬೆಳ್ಳಿ ಜಯಿಸಿದರು. ಬಾಲಕರ 4/100 ಮೀ. ಫ್ರೀಸ್ಟೈಲ್​​ ರಿಲೇ ಗ್ರೂಪ್​-2ರಲ್ಲಿ ರಾಜ್ಯ ತಂಡಕ್ಕೆ ರಜತ ಒಲಿಯಿತು.

ಜಸ್​ ಸಿಂಗ್​ (200 ಮೀ. ಮೆಡ್ಲೆ), ದಿಶಾ ರಾಜೇಶ್​ ಹೊಂಡಿ (50 ಮೀ. ಫ್ರೀಸ್ಟೈಲ್​), ಮೊಹಮ್ಮದ್​ ಜಿಯಾದ್​ (100 ಮೀ. ಬ್ಯಾಕ್​ಸ್ಟ್ರೊಕ್​) ಕಂಚು ಗೆದ್ದರು. ಬಾಲಕರ 4/50 ಮೀ. ಫ್ರೀಸ್ಟೈಲ್​ ರಿಲೇ ಸ್ಪರ್ಧೆಯಲ್ಲಿ ರಾಜ್ಯ ತಂಡ ಕಂಚು ಜಯಿಸಿತು.