ಭುವನೇಶ್ವರ: ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಪತನವಾಗುತ್ತಿದ್ದು, ಮುಂದಿನ ಪೀಳಿಗೆಯ ಮೇಲೆ ಇದರ ಪರಿಣಾಮ ಬೀರಲಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಇದನ್ನೂ ಓದಿ: ‘ಇಟಾಲಿಯನ್ ಪ್ರಜೆಯಾಗಿದ್ದಾಗ್ಯೂ ಸೋನಿಯಾ ಗಾಂಧಿ ಮತದಾರರ ಪಟ್ಟಿಯಲ್ಲಿದ್ದರು’! ಬಿಜೆಪಿ ಪ್ರತಿದಾಳಿ Sonia Gandhi
ಭುವನೇಶ್ವರದ ಕಿಸ್, ಕಿಟ್ ಮತ್ತು ಕಿಮ್ಸ್ ಶಿಕ್ಷಣ ಸಂಸ್ಥೆಯಿಂದ ಸ್ಕೂಲ್ ಆಫ್ ಲಾ ಸಭಾಂಗಣದಲ್ಲಿ ಆಯೋಜಿಸಿದ್ದ “ಸಾಮಾಜಿಕ ಮೌಲ್ಯಗಳ ಪತನ ಮತ್ತದರ ಪರಿಣಾಮಗಳು” ಕುರಿತು ಉಪನ್ಯಾಸ ನೀಡಿದ ಅವರು, "ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಪ್ರತಿಯೊಂದು ವೃತ್ತಿಯಲ್ಲೂ ಮೌಲ್ಯಗಳು ಕ್ಷೀಣಿಸುತ್ತಿವೆ. ಇದರಿಂದ ಭ್ರಷ್ಟಾಚಾರ ಸೇರಿ ಹಲವು ಜ್ವಲಂತ ಸಮಸ್ಯೆಗಳು ತಲೆದೋರುತ್ತಿವೆ. ಮೌಲ್ಯಗಳ ಪುನರ್ ಸ್ಥಾಪನೆ ಇಂದಿನ ಅಗತ್ಯ" ಎಂದರು.
"ಭ್ರಷ್ಟಾಚಾರಿಗಳಿಗೆ ಕಾನೂನಿನ ಹೆದರಿಕೆ ಇಲ್ಲದಂತಾಗಿದೆ. ವಿದ್ಯಾವಂತರಿಂದಲೇ ಈ ಪಿಡುಗು ವೃದ್ಧಿಸುತ್ತಿರುವುದು ಮತ್ತಷ್ಟು ಕಳವಳಕಾರಿ. ಶಿಕ್ಷಣ ಸಂಸ್ಥೆಗಳು ವಿದ್ಯೆಯ ಜೊತೆ ಜೊತೆಗೆ ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಯುವ ಸಮೂಹ ಮುಂದಾಗಬೇಕು. ಶಿಕ್ಷಣ ಕ್ಷೇತ್ರ ಇಂದು ಅಗಾಧವಾಗಿ ಬೆಳವಣಿಗೆಯಾಗುತ್ತಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅನನ್ಯ" ಎಂದು ಹೇಳಿದರು.
ಇದನ್ನೂ ಓದಿ: ಟ್ರಂಪ್ ಭೇಟಿಗೂ ಮುನ್ನ ಪುಟಿನ್ಗೆ ಕಿಮ್ ಜಾಂಗ್ ಕರೆ! ಇಬ್ಬರ ಮಧ್ಯೆ ಕುತೂಹಲಕಾರಿ ವಿಚಾರಗಳು ಚರ್ಚೆ? | Putin
"ಕಳೆದ 15 ವರ್ಷಗಳಲ್ಲಿ 1860ಕ್ಕೂ ಅಧಿಕ ಶಾಲೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದು, ಈ ಪೈಕಿ ಕಳಿಂಗ ಶಿಕ್ಷಣ ಸಂಸ್ಥೆ ಸರ್ವಶ್ರೇಷ್ಠವಾದದ್ದು. ಏಕೆಂದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ದೊರೆಯುತ್ತಿದೆ. ಬುಡಕಟ್ಟು ಸಮುದಾಯ, ಬಡವರು, ಬಲ್ಲಿದರು ಸೇರಿದಂತೆ ಪ್ರತಿಯೊಬ್ಬರಿಗೂ ಒಂದೇ ಸೂರಿನಡಿ ಸಮಗ್ರ ಶಿಕ್ಷಣ ದೊರೆಯುತ್ತಿದೆ. 20 ಸಾವಿರಕ್ಕೂ ಅಧಿಕ ಬೋಧಕರು, ಬೋಧಕೇತರರ ಬಹುದೊಡ್ಡ ಶೈಕ್ಷಣಿಕ ನಿಧಿ ಇದಾಗಿದೆ. ಅಧಿಕ ಪ್ರಮಾಣದಲ್ಲಿ ಬಡವರಿಗೆ ಉಚಿತ ಊಟ, ವಸತಿ, ಶಿಕ್ಷಣ ದೊರೆಯುತ್ತಿರುವುದು ಶ್ಲಾಘನೀಯ" ಎಂದರು.
"ಕಳಿಂಗ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಚ್ಯುತಾ ಸಮಂತ್ ದೇಶದಲ್ಲೆಲ್ಲೂ ಕಂಡು ಕೇಳರಿಯದ ದೊಡ್ಡ ಪ್ರಮಾಣದ ಹೊರೆಯನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡಿದ್ದಾರೆ. ಹೀಗಾಗಿ ಇವರನ್ನು “ಅಟ್ಲಾಸ್ [ಭೂಮಂಡಲ] ಸಮಂತ” ಎಂದು ಕರೆಯಲು ಇಚ್ಚಿಸುತ್ತೇನೆ. ಎಲ್ಲಾ ರೀತಿಯಿಂದಲೂ ಈ ಶಿಕ್ಷಣ ಸಂಸ್ಥೆ ಅತ್ಯುತ್ತಮ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸ್ಕೂಲ್ ಆಫ್ ಲಾ ನಿರ್ದೇಶಕ ಫ್ರೊ.ರೋಸ್ ವರ್ಗೀಸ್, ಪ್ರಾಧ್ಯಾಪಕರಾದ ಪ್ರೋ ಎನ್.ಎಲ್. ಮಿತ್ರ ಮತ್ತಿತರರು ಉಪಸ್ಥಿತರಿದ್ದರು.