ನ್ಯೂಸ್

ಮೋದಿ ಜನ್ಮದಿನಕ್ಕೆ ಸಿದ್ಧವಾಗುತ್ತಿದೆ ವಿಶೇಷ 'ಥಾಲಿ'; 40 ನಿಮಿಷದಲ್ಲಿ ತಿಂದು ಮುಗಿಸಿದರೆ ಸಿಗಲಿದೆ 8.5 ಲಕ್ಷ ಬಹುಮಾನ

ನವ ದೆಹಲಿ: ನಾಳೆ (ಸೆ.17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಈ ಪ್ರಯುಕ್ತ ದೇಶದ ಹಲವೆಡೆ ಒಂದಿಲ್ಲೊಂದು ವಿಶೇಷತೆಗಳು ನಡೆಯುತ್ತಲೇ ಇವೆ. ಇದೀಗ ದೆಹಲಿಯ ಹೊಟೇಲೊಂದು ಆಹಾರ ಪ್ರಿಯರಿಗೆ ಮೋದಿ ಹುಟ್ಟು ಹಬ್ಬಕ್ಕೆ ವಿಶೇಷ ಚಾಲೆಂಜ್ ಒಂದನ್ನ ನೀಡಿದೆ. ಅದೇನಪ್ಪಾ ಅಂದ್ರೆ 40 ನಿಮಿಷದ ಒಳಗೆ ವಿವಿಧ ರುಚಿಯ 56 ಬಗೆಗೆಳಿರುವ ವಿಶೇಷ 'ಥಾಲಿ'ಯನ್ನು ತಿಂದು ಮುಗಿಸಿದರೆ ಬರೋಬ್ಬರಿ 8.5 ಲಕ್ಷ ರೂಪಾಯಿ ಬಹುಮಾನ ನೀಡಲಿದೆ.

ತಮ್ಮ ಗ್ರಾಹಕರಿಗೆ ಈ ಆಫರ್​​​ನ್ನು ನೀಡಿರುವುದು ದೆಹಲಿಯ ಕನ್ನಾಟ್ ಪ್ರದೇಶದಲ್ಲಿರುವ ARDOR 2.0 ರೆಸ್ಟೋರೆಂಟ್. ಮೋದಿ ಜನ್ಮದಿನದ ಅಂಗವಾಗಿ ದೊಡ್ಡ ಗಾತ್ರದ 56 ಬಗೆಯ ವಿಶೇಷ ಥಾಲಿಯನ್ನು ಆಹಾರಪ್ರಿಯರಿಗೆ ಪರಿಚಯಿಸುತ್ತಿದೆ. ಈ ಥಾಲಿಗೆ '56 inch ಮೋದಿ ಜಿ' ಎಂದು ಹೆಸರಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಮ್ಮ ಭಾರತದ ಹೆಮ್ಮೆ. ನಾನು ಸದಾ ಕಾಲಕ್ಕೂ ಅವರನ್ನು ಗೌರವಿಸುತ್ತೇನೆ. ಹೀಗಾಗಿ ಪ್ರಧಾನಿಯವರ ಈ ಬಾರಿಯ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಏನಾದರು ಮಾಡಲು ಮುಂದಾದೆವು. ಈ ವೇಳೆ ಮೋದಿ ಹೆಸರಿನಲ್ಲಿ ವಿಶೇಷ ತಿನಿಸುಗಳ ಥಾಲಿ ಮಾಡುವುದೆಂದು ನಿರ್ಧರಿಸಿದೆವು ಎಂದು ರೆಸ್ಟೋರೆಂಟ್​ನ್ ಮಾಲೀಕ ಸುಮಿತ್ ಕಲಾರ ತಿಳಿಸಿದ್ದಾರೆ.

ಈ ವಿಶೇಷ ಥಾಲಿಯನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಬೇಕೆಂದು ಅಂದುಕೊಂಡಿದ್ದೆವು. ಆದರೆ ಭಧ್ರತೆಯ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಇದನ್ನು ನಾವು ನಮ್ಮ ಗ್ರಾಹಕರಿಗೆ ಪರಿಚಯಿಸುತ್ತಿದ್ದೇವೆ. ಸೆ. 17 - ಸೆ. 26ರ ವರೆಗೆ ಮೋದಿ ಜನ್ಮದಿನಕ್ಕೆ ಸಿದ್ಧಪಡಿಸಿರುವ ವಿಶೇಷ ಥಾಲಿಯ ರುಚಿ ನೋಡಬಹುದು. ಅದೃಷ್ಟಶಾಲಿ ಗ್ರಾಹಕರಿಗೆ ಮೋದಿಯವರ ನೆಚ್ಚಿನ ತಾಣ ಕೇಧಾರನಾಥಕ್ಕೆ ತೆರಳುವ ಅವಕಾಶ ನೀಡುತ್ತಿದ್ದೇವೆ ಎಂದು ರೆಸ್ಟೋರೆಂಟ್ ಮಾಲೀಕ ಸುಮಿತ್ ಹೇಳಿದ್ದಾರೆ. (ಏಜೆನ್ಸೀಸ್)