ನ್ಯೂಸ್

ದೆಹಲಿಯಲ್ಲಿ ಸ್ಫೋಟಕ್ಕೆ ಕಾರಣರಾದವರನ್ನು ಬಿಡುವ ಮಾತೇ ಇಲ್ಲ, ತಕ್ಕ ಶಿಕ್ಷೆಯಾಗಲಿದೆ: ಮೋದಿ ಕಠಿಣ ಎಚ್ಚರಿಕೆ | Delhi Blasts

ನವಹೆದಲಿ: ದೆಹಲಿಯಲ್ಲಿ ಸೋಮವಾರ ನಡೆದ ಕಾರು ಸ್ಫೋಟದ(Delhi Blasts)ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ, ಅವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಠಿಣ ಎಚ್ಚರಿಕೆ ನೀಡಿದರು.

ಎರಡು ದಿನಗಳ ಭೂತಾನ್‌ ಭೇಟಿಯಲ್ಲಿರುವ ಪ್ರಧಾನಿ ಮೋದಿ, ಸ್ಫೋಟದ ನಂತರ ರಾತ್ರಿಯಿಡೀ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿರುವುದಾಗಿ ಹೇಳಿದರು.

"ಇಂದು, ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗಿದೆ. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ" ಎಂದು ಅವರು ಹೇಳಿದರು.

"ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ(ತನಿಖಾ ಸಂಸ್ಥೆ) ನಾನು ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ. ಹೊಣೆಗಾರರಾದ ಎಲ್ಲರನ್ನು ತಕ್ಕ ಶಿಕ್ಷೆ ನೀಡಲಾಗುವುದು" ಎಂದು ಅವರು ಹೇಳಿದರು.

ಘಟನೆಯ ಹಿನ್ನೆಲೆ

ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಸೋಮವಾರ(ನ.10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು, ಪಕ್ಕದಲ್ಲಿ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. (ಏಜೆನ್ಸೀಸ್)