ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದೆ. ಒಕ್ಕೂಟದ ನೇತೃತ್ವ ವಹಿಸಿರುವ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ ಬೇಕಾದ 272ರ ಗಡಿಯನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಅಸಾಧ್ಯ. ಮಿತ್ರಪಕ್ಷಗಳ ಬೆಂಬಲವನ್ನು ಅವಲಂಬಿಸುವುದು ಅನಿವಾರ್ಯ. ಹಾಗಾಗಿ ಈಗ ಮತ್ತೆ ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾಗುತ್ತಿದೆ.
ಹಿಂದೆಯೂ ದೇಶದ ಜನ ಸಾಕಷ್ಟು ಬಾರಿ ಸಮ್ಮಿಶ್ರ ಸರ್ಕಾರಗಳನ್ನು ನೋಡಿದ್ದಾರೆ. ಆಗೆಲ್ಲ ‘ಮಿತ್ರ’ ಪಕ್ಷಗಳು ಸರ್ಕಾರದ ನೇತೃತ್ವ ವಹಿಸಿಕೊಂಡವರ ಜತೆಗೆ ಹೇಗೆ ವರ್ತಿಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯವಾಗಿ ಬ್ಲ್ಯಾಕ್ವೆುೕಲ್ ಮಾಡುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬ ರೀತಿಯಲ್ಲಿ ಅವು ವರ್ತಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಇಂತಹ ನಡವಳಿಕೆ ಸಂಪುಟ ರಚನೆಯೊಂದಿಗೇ ಶುರುವಾಗುತ್ತದೆ. ತಮ್ಮ ಪಕ್ಷಕ್ಕೆ ಲೋಕಸಭಾಧ್ಯಕ್ಷರ ಸ್ಥಾನವೇ ಬೇಕು, ಗೃಹ, ಹಣಕಾಸು, ರೈಲ್ವೆ ಮುಂತಾದ ಮಹತ್ವದ ಖಾತೆಗಳೇ ಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಿ ಒತ್ತಡ ಹೇರುವ ಕೆಲಸ ಈಗಾಗಲೇ ಆaರಂಭವಾಗಿದೆ ಎನ್ನುತ್ತಿವೆ ಮೂಲಗಳು.
ಕಳೆದ ಎರಡು ಲೋಕಸಭಾ ಅವಧಿಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಬಿಜೆಪಿ ಸಂಪೂರ್ಣ ಬಹುಮತ ಹೊಂದಿತ್ತು. ಮಿತ್ರಪಕ್ಷಗಳು ತಮ್ಮ ಇತಿಮಿತಿ ಅರಿತಿದ್ದವು. ಯಾವ ವಿಷಯದಲ್ಲಿಯೂ ಹಸ್ತಕ್ಷೇಪ ಎದುರಾಗುತ್ತಿರಲಿಲ್ಲ. ಹಾಗಾಗಿಯೇ ಹತ್ತು ವರ್ಷಗಳಲ್ಲಿ ಆರ್ಥಿಕತೆ ವಿಷಯದಲ್ಲಿ ಭಾರತ ಹಿಂದೆಂದೂ ಕಾಣದಷ್ಟು ಔನ್ನತ್ಯಕ್ಕೇರಿತು. ಇಡೀ ಜಗತ್ತು ಆರ್ಥಿಕ ಹಿಂಜರಿಕೆಯನ್ನು ಅನುಭವಿಸುತ್ತಿರುವಾಗ, ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಅತಿ ಕಡಿಮೆ ಆರ್ಥಿಕ ಬೆಳವಣಿಗೆ ದರ ದಾಖಲಿಸುತ್ತಿರುವಾಗ ಭಾರತ ಮಾತ್ರ ವರ್ಷದಿಂದ ವರ್ಷಕ್ಕೆ ಅಚ್ಚರಿಯಾಗುವಷ್ಟರಮಟ್ಟಿಗೆ ವೃದ್ಧಿಯನ್ನು ದಾಖಲಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಜನರ ದೈನಂದಿನ ಬಳಕೆಗೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಒಂದು ಉದಾಹರಣೆಯಾಗಿದೆ.
ಅದರ ಮೂಲಕ ಹಣ ವರ್ಗಾವಣೆ ಈಗ ಎಷ್ಟು ಸುಲಭವಾಗಿದೆಯೆಂದರೆ ಹಳ್ಳಿಹಳ್ಳಿಗಳಲ್ಲಿಯೂ ಜನರು ಮೊಬೈಲ್ ಫೋನ್ ಮೂಲಕ ವ್ಯವಹಾರ ಮಾಡಲಾರಂಭಿಸಿದ್ದಾರೆ. ಅದನ್ನು ಬೇರೆ ದೇಶಗಳು ಕೂಡ ಕೇಳಿಪಡೆದು ಉಪಯೋಗಿಸಲು ಆರಂಭಿಸಿವೆ. ಕೆಲವೇ ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಹೇಗಿತ್ತೆಂಬುದು ಎಲ್ಲರಿಗೂ ಗೊತ್ತು. ಈಗ ಇಡೀ ಜಗತ್ತಿನಲ್ಲಿ ಭಾರತದ ವರ್ಚಸ್ಸು ಹತ್ತಾರು ಪಟ್ಟು ಹೆಚ್ಚಾಗಿದೆ. ಇವು ಕೆಲವು ಉದಾಹರಣೆಗಳು ಮಾತ್ರ. ಈ ಬೆಳವಣಿಗೆ ಇದೇ ರೀತಿ ಮುಂದುವರಿಯಬೇಕೆಂದರೆ ಮುಂದಿನ ಸರ್ಕಾರದಲ್ಲಿ ಭಾಗಿಯಾಗುವ ಮಿತ್ರಪಕ್ಷಗಳು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಸ್ವಪ್ರತಿಷ್ಠೆ, ಮನಸ್ತಾಪ ಮುಂತಾದ ನೇತ್ಯಾತ್ಮಕ ಮನೋಭಾವವನ್ನು ಬದಿಗಿರಿಸಿ ನೀತಿ-ನಿರ್ಧಾರಗಳಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ರಾಷ್ಟ್ರಹಿತ ಸಾಧಿಸಲು ಸಾಧ್ಯವಾಗುತ್ತದೆ.