ಮುದಗಲ್ ಪುರಸಭೆಯಲ್ಲಿ ಲಿಂಗಸಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೋಮವಾರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಾಧಿಕಾರಿ ಪ್ರವೀಣ ಭೋಗಾರ, ವ್ಯವಸ್ಥಾಪಕ ಸುರೇಶ ಜಾಲಹಳ್ಳಿ ಇತರರಿದ್ದರು.
- ಮುದಗಲ್ ಪುರಸಭೆ ಆಡಳಿತಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಭರವಸೆ
ಮುದಗಲ್: ಪುರಸಭೆ ಸದಸ್ಯರ ಆಡಳಿತ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರ ನೂತನ ಆಡಳಿತಾಧಿಕಾರಿಯನ್ನಾಗಿ ಲಿಂಗಸಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರನ್ನು ನೇಮಿಸಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ದೂರುಗಳು ಬಂದಿವೆ. ಅಲ್ಲದೆ ಮೂಲಸೌಲಭ್ಯ ಸೇರಿ ಇತರ ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ನಂತರ ಅವರನ್ನು ಪುರಸಭೆ ಸಿಬ್ಬಂದಿ ಸನ್ಮಾನಿಸಿದರು. ಸಿಬ್ಬಂದಿ ಅಂಥೋನಿರಾಜ್, ರಂಗನಾಥ ತಳವಾರ, ಆರಿಪುನ್ನಿಸಾ ಬೇಗಂ, ರೆಹಮತಾ ಬೇಗಂ, ನಿಸಾರ್ ಅಲಿ, ಕುಪ್ಪಣ್ಣ, ಜಿಲಾನಿಪಾಷಾ, ಬಸವರಾಜ ಕೊಟ್ಟೂರು, ಚನ್ನಮ್ಮ ದಳವಾಯಿ ಮಠ, ಬಸವರಾಜ ಇತರರಿದ್ದರು.
ಒತ್ತುವರಿ ತೆರವಿಗೆ ಆಗ್ರಹ: ಪುರಸಭೆ ವ್ಯಾಪ್ತಿಯಲ್ಲಿ ಜಾಗ, ನಿವೇಶನಗಳು ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ದಲಿತ ಸಂಘಟನೆಗಳ ಪದಾಧಿಕಾರಿಗಳು ಆಡಳಿತಾಧಿಕಾರಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ವೆಂಕಟೇಶ ಹಿರೇಮನಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆಗಳ ಬೀದಿ ಬದಿಗಳಲ್ಲಿ ಕೆಲ ಅಂಗಡಿಗಳಿಂದ ಬಾಡಿಗೆ ವಸೂಲಿ ಮಾಡುತ್ತಿರುವುದು, ಮುಖ್ಯ ರಸ್ತೆ ಹದಗೆಟ್ಟಿದ್ದು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದು ,ಪುರಸಭೆ ವ್ಯಾಪ್ತಿಯ ಲೇಔಟ್‌ಗಳಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಾಣ, ಕುಡಿವ ನೀರಿನ ಸಮಸ್ಯೆ ಹಾಗೂ ಬಸ್ ನಿಲ್ದಾಣದ ಹತ್ತಿರ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಮಾಡುವ ಕುರಿತು ಮನವಿ ಮಾಡಿದರು.
ಆಡಳಿತಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಸಾರ್ವಜನಿಕ ಆಸ್ತಿಗಳನ್ನು ಅತಿಕ್ರಮಿಸಿಕೊಂಡಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಂಘಟನೆಯ ರವಿ ಕಟ್ಟಿಮನಿ ಇತರರಿದ್ದರು.