ನ್ಯೂಸ್

ಸರ್ಕಾರಿ ಕಚೇರಿಗೆ ಬರುವವರಿಗೆ ಸ್ಪಂದಿಸಿ

ತಿ.ನರಸೀಪುರ: ಹೋಬಳಿ ಕೇಂದ್ರದಲ್ಲಿ ಕಂದಾಯ ಅದಾಲತ್ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.

ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ಮತ್ತು ಪಿಂಚಣಿ ಆದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರ ಮನವಿ ಸ್ವೀಕರಿಸಿದ ನಂತರ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸಿಕೊಳ್ಳಲು ಕಂದಾಯ ಮತ್ತು ಪಿಂಚಣಿ ಆದಾಲತ್ ಉತ್ತಮ ಕಾರ್ಯಕ್ರಮ. ಅಲ್ಲದೆ ನಿಗದಿತ ಸಮಯದೊಳಗೆ ಜನರ ಕೆಲಸ ಮಾಡಿಕೊಡಲು ಇದರಿಂದ ಸಾಧ್ಯ ಎಂದು ಹೇಳಿದರು.

ಸರ್ಕಾರಿ ಕಚೇರಿಗಳಿಗೆ ಬರುವ ಪ್ರತಿಯೊಬ್ಬರಿಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ತಿಂಗಳಿಗೊಮ್ಮೆ ಜಿಲ್ಲೆಯ ಯಾವುದಾದರೊಂದು ಹೋಬಳಿಯಲ್ಲಿ ಅದಾಲತ್ ಕಾರ್ಯಕ್ರಮವನ್ನು ಆಯಾಯ ಭಾಗದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.

ಅದಾಲತ್‌ನಲ್ಲಿ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹೊತ್ತು ತಂದಿದ್ದರು. ಸುಮಾರು 201 ಪಿಂಚಣಿ ಮತ್ತು 1,200 ಪೌತಿ ಖಾತೆಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.

ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಮಾಡಿಕೊಡದ ಶಾಸಕರು ಹಾಗೂ ತಾಲೂಕು ಆಡಳಿತದ ಧೋರಣೆ ವಿರುದ್ಧ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ಎಂ.ದೇವರಾಜು ಹಾಗೂ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಸದಸ್ಯರಾದ ಎಸ್.ವಿ.ಜಯಪಾಲ ಭರಣಿ, ಎಂ.ಸುಧೀರ್, ತಾಪಂ ಸದಸ್ಯರಾದ ಎಚ್.ಜವರಯ್ಯ, ಶ್ರೀನಿವಾಸಗೌಡ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಪುರಸಭೆಯ ಸದಸ್ಯರಾದ ಕೃಷ್ಣೇಗೌಡ, ಸುರೇಶ್, ವಿಜಯಕುಮಾರ್, ಸೌಮ್ಯರಾಣಿ ಮುರಳೀಧರ, ಉಪವಿಭಾಗಾಧಿಕಾರಿ ಡಾ.ಎನ್.ಸಿ. ವೆಂಕಟರಾಜ್, ತಹಸೀಲ್ದಾರ್ ಡಿ.ನಾಗೇಶ್, ರಾಜಸ್ವ ನಿರೀಕ್ಷಕ ಚಲುವರಾಜು, ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಮತ್ತಿತರರು ಹಾಜರಿದ್ದರು.