ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್, ಡಿವೈಎಸ್‌ಪಿ ಅನಿಲ್ ಕುಮಾರ್ ಕೊಪ್ಪ,ಭರಮಪ್ಪ ಬೆಳಗಲಿ, ಜೆ.ಮಂಜು ಇದ್ದರು. 
ನ್ಯೂಸ್

ಜನ ಸಾಮಾನ್ಯರ ಸಮಸ್ಯೆ ಕೂಡಲೇ ಸ್ಪಂದಿಸಿ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ಪೋಲಿಸ್ ಇಲಾಖೆ ಮತ್ತು ನಾಗರಿಕರ ಜತೆ ಉತ್ತಮ ಬಾಂಧವ್ಯವಿರಬೇಕು. ಜನ ಸಾಮಾನ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿದಾಗ ಮಾತ್ರ ಇಲಾಖೆ ಕುರಿತು ಜನರಲ್ಲಿ ವಿಶ್ವಾಸ ಮೂಡಲು ಸಾಧ್ಯ ಎಂದು ಎಸ್‌ಪಿ ಉಮಾಪ್ರಶಾಂತ್ ಹೇಳಿದರು.
ಮಂಗಳವಾರ ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಯಾರೇ ದೂರು ನೀಡಿದರು ಇಲಾಖೆ ಅದನ್ನು ದಾಖಲಿಸಿಕೊಳ್ಳಬೇಕು. ಅಪರಾಧಿ ಯಾರು ಎನ್ನುವುದು ತನಿಖೆ ಬಳಿಕ ತಿಳಿಯಲಿದೆ. ಯಾವುದೇ ತಪ್ಪು ಮಾಡದ ನಿರಪರಾಧಿ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸತ್ಯತೆ ಅಂಶಗಳನ್ನು ಸೂಕ್ಷ್ಮತೆಯಿಂದ ತನಿಖೆ ಮಾಡಿ ಅದರ ವರದಿಯನ್ನು ನಾವು ನ್ಯಾಯಲಯಕ್ಕೆ ನೀಡುತ್ತಿವೆ. ಅಂತಹ ತಪ್ಪು ಒಂದು ವೇಳೆ ಇಲಾಖೆಯಿಂದ ನಡೆದರೆ ನೀವು ಬರವಣಿಗೆ ಮೂಲಕ ಮತ್ತೊಮ್ಮೆ ದೂರು ನೀಡಿದರೆ ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುವುದು ಎಂದರು.
ಪಟ್ಟಣದಲ್ಲಿ ಅಂಗಡಿ ಸಾಮಾಗ್ರಿಗಳನ್ನು ಬೆಳಗ್ಗೆ 5ರಿಂದ 6 ಹಾಗೂ ರಾತ್ರಿ 9ರಿಂದ 10 ಗಂಟೆ ವೇಳೆಗೆ ಅನ್‌ಲೋಡ್ ಮಾಡಲು ಸಮಯ ನಿಗದಿಪಡಿಸಲಾಗಿದೆ. ಈ ಕುರಿತು ಸ್ಥಳೀಯ ಇಲಾಖೆಗಳ ಮೂಲಕ ಅವರಿಗೆ ಮಾಹಿತಿ ಜತೆ ನೋಟೀಸ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪಪಂ ಸದಸ್ಯ ರಫೀಕ್ ಅಹಮದ್ ಮಾತನಾಡಿ, ನಮಗೆ ಅನ್ಯಾಯವಾದಾಗ ದೂರು ನೀಡಿದರೆ ಮುಗ್ದರ ಮೇಲೆ ಹೆಚ್ಚಿನ ಪ್ರಹಾರ ನಡೆಯುತ್ತಿದೆ. ಈ ಕುರಿತು ಸೂಕ್ತ ಕ್ರಮಕೈಗೊಂಡು ಬಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಸೌಮ್ಯ ವಿಜಯ್‌ಕುಮಾರ್ ಮಾತನಾಡಿ, ಶಾರದಾ ನಗರದಲ್ಲಿ ಸೋಮವಾರ ನಡೆಯುತ್ತಿರುವ ಸಂತೆ ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರಿಗೆ ಒಳಗಡೆ ವ್ಯಾಪಾರ ಮಾಡಲು ಅನುವು ನೀಡಬೇಕು. ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅವಘಡಗಳು ಸಂಭವಿಸಿದಾಗ ಅಪಘಾತ ಮಾಡಿದವರನ್ನು ಗುರುತಿಸಲು ಸಿಸಿ ಕ್ಯಾಮರ ಅಳವಡಿಸಬೇಕು ಎಂದರು.