ನ್ಯೂಸ್

ರೆಸಾರ್ಟ್ ನಿರ್ಮಾಣಕ್ಕೆ ಕ್ರಮ: ಮಂಚನಬೆಲೆ ಬಳಿ 10 ಎಕರೆ ಭೂಮಿ ನೀಡುವಂತೆ ಡಿಸಿಗೆ ಸಿಪಿವೈ ಸೂಚನೆ

Ramanagara

ರಾಮನಗರ : ಮಾಗಡಿಯ ಮಂಚನಬೆಲೆ ಜಲಾಶಯದ ಸಮೀಪ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಮತ್ತು ವಿಹಾರಧಾಮ (ಜೆಎಲ್ಆರ್) ವತಿಯಿಂದ ಸುಸಜ್ಜಿತ ರೆಸಾರ್ಟ್‌ಗಳನ್ನು ನಿರ್ಮಿಸುವ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಮಿನಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಸಚಿವರು,

ಮಂಚನಬೆಲೆ ಜಲಾಶಯ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಸಮೀಪವಿರುವ ಈ ತಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಪ್ರವಾಸಿ ಸ್ನೇಹಿಯಾಗಿ ಮಾಡಿದರೆ ಜನಸಾಮಾನ್ಯರು ಬರುತ್ತಾರೆ ಎಂದು ಹೇಳಿದರು.

ಇಲ್ಲಿ ನಿರ್ಮಾಣವಾಗುವ ಜಂಗಲ್ ಲಾಡ್ಜ್ - ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಜಲಾಶಯ ಹಾಗೂ ಸುತ್ತಮುತ್ತಲ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಯೋಜನೆಯನ್ನು ಕಾರ್ಯಗತಗೊಳಿಸಬೇಕು. 10 ಎಕರೆ ಕಂದಾಯ ಜಮೀನನ್ನು ಜಂಗಲ್ ಲಾಡ್ಜ್‌ಗೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಿದರು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತೆರಳಿ ಜಮೀನು ವರ್ಗಾಯಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಸಿಂಧು ಬಿ.ರೂಪೇಶ್, ಜೆಎಲ್ಆರ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ, ರಾಮನಗರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಜಿಪಂ ಸಿಇಒ ಇಕ್ರಂ ಮತ್ತಿತರ ಅಧಿಕಾರಿಗಳು ಇದ್ದರು.

ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಕ್ರೀಡೆ : ಕಳೆದ ವಾರ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡರ ಜತೆ ಕೆಆರ್‌ಎಸ್‌ಗೆ ತೆರಳಿದ್ದಾಗ ಜಲಾಶಯದ ಹಿನ್ನೀರಿನಲ್ಲಿ ಸ್ಪೀಡ್ ಬೋಟ್‌ನಲ್ಲಿ 40 ಕಿಮೀ ಸುತ್ತಾಡಿದ್ದಾಗಿ ತಿಳಿಸಿದ ಸಿಪಿವೈ, ಈ ವೇಳೆ 3 ದ್ವೀಪಗಳನ್ನು ವೀಕ್ಷಿಸಿದೆ. ಇಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌ಗೆ ತಿಳಿಸಿದರು. ಕೆಆರ್‌ಎಸ್ ಹಿನ್ನೀರಿನಲ್ಲಿ 330 ಎಕರೆ ಜಮೀನಿದೆ ಹಾಗೂ ಅತ್ಯಂತ ಪುರಾತನ ವೇಣುಗೋಪಾಲ ದೇವಾಲಯವಿದೆ. 1450 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕಾವೇರಿ ನೀರಾವರಿ ನಿಗಮದಿಂದ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ತಿಳಿಸಿದರು.